ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಹಾರಗಳು: ಐತಿಹಾಸಿಕ ವಿಶ್ಲೇಷಣೆ
ಮಾನವನ ಸಾಮಾಜಿಕ ಜೀವನ ಕ್ರಮದಲ್ಲಿ ಆರ್ಥಿಕ ಹಾಗೂ ವಾಣಿಜ್ಯ ವ್ಯವಹಾರಕ್ಕೂ ಇರುವ ಪ್ರಾಮುಖ್ಯತೆ ಒತ್ತಿ ಹೇಳಬೇಕೆಂದಿಲ್ಲ. ಎಲ್ಲಾ ಪ್ರಾಚೀನ ನಾಗರಿಕತೆಗಳಲ್ಲೂ ಒಂದು ನಿರ್ದಿಷ್ಟ ಆರ್ಥಿಕ ಕ್ರಮ ಮತ್ತು ವಾಣಿಜ್ಯ ನಿಯಮಗಳು ಅಸ್ತಿತ್ವದಲ್ಲಿದ್ದವು. ಮನುಷ್ಯ ಜೀವನದ ಎಲ್ಲಾ ಕ್ಷೇತ್ರದಲ್ಲೂ ನಿಖರವಾಗಿ ಮಧ್ಯಪ್ರವೇಶಿಸುವ ಒಂದು ಜೀವನ ಪದ್ಧತಿಯಾಗಿ, ಇಸ್ಲಾಂ ತನ್ನದೇ ಆದ ಆರ್ಥಿಕ ನೀತಿಗಳು ಹಾಗೂ ನಿಲುವುಗಳನ್ನು ಮುಂದಿಟ್ಟಿದೆ. ಸಂಪತ್ತಿನ ಉತ್ಪಾದನೆ ಮತ್ತು ವಿತರಣೆಯಲ್ಲಿ ಮಾತ್ರವಲ್ಲದೆ, ಮನುಷ್ಯರ ನಡುವೆ ಇರುವ ಆರ್ಥಿಕ - ವಾಣಿಜ್ಯ ವ್ಯವಹಾರಗಳಲ್ಲೂ ಕೃತ್ಯವಾದ ಮಾನದಂಡಗಳನ್ನು ಹಾಗೂ ನಿರ್ಬಂಧಗಳನ್ನು ಇಸ್ಲಾಂ ಬೋಧಿಸಿದೆ.
ಆಧುನಿಕ ಮನುಷ್ಯನ ವೈಯಕ್ತಿಕ ಹಾಗೂ ಸಾಮೂಹಿಕ ಜೀವನದಲ್ಲೂ ಅನಿವಾರ್ಯವಾದ ಘಟಕವಾಗಿದೆ ಬ್ಯಾಂಕಿಂಗ್ ವ್ಯವಸ್ಥೆ. ಗ್ರಾಹಕರಿಂದ ಹಣವನ್ನು ಠೇವಣಿಯಾಗಿ ಸ್ವೀಕರಿಸುವುದು, ಅಗತ್ಯವಿರುವವರಿಗೆ
ಹಣ ಸಾಲವಾಗಿ ನೀಡುವುದು, ನಾಣ್ಯಗಳನ್ನು ವಿನಿಮಯ
ಮಾಡುವುದು, ಹಣದ ಸುರಕ್ಷತೆಯನ್ನು ಖಚಿತಪಡಿಸಲು ಹಣದ ಬದಲಾಗಿ ಬಳಸಬಹುದಾದ ಚೆಕ್ಗಳಂತಹ ದಾಖಲೆಗಳನ್ನು ಒದಗಿಸಿ ಅದನ್ನು ಹಣವಾಗಿ ಪರಿವರ್ತಿಸಲು ಅವಕಾಶ ಕಲ್ಪಿಸುವುದು ಎಂಬೀ ಕಾರ್ಯಗಳಾಗಿವೆ ಮುಖ್ಯವಾಗಿ ಬ್ಯಾಂಕಿಂಗ್ ಸೇವೆಗಳಾಗಿ ಪರಿಗಣಿಸಲ್ಪಡುವುದು. ಈ ವ್ಯವಸ್ಥೆಯ ಇತಿಹಾಸವನ್ನು ಹುಡುಕುವವರು ಹೆಚ್ಚಾಗಿ 16ನೇ ಶತಮಾನದ ಯೂರೋಪ್ ತಲುಪುತ್ತಾರೆ. ಇತರ ಹಲವು ಕ್ಷೇತ್ರಗಳಲ್ಲಿರುವ ರೀತಿ ಚರಿತ್ರೆಯ ಕೃತ್ಯವಲ್ಲದ ಅನ್ವೇಷಣೆಯ ಫಲವಾಗಿದೆ ಇದು. ವಿಜ್ಞಾನ ಕ್ಷೇತ್ರದಲ್ಲಿ ಮುಸ್ಲಿಮರ ಕೊಡುಗೆಗಳನ್ನು ಕಡೆಗಣಿಸಿದಂತೆ, ಆರ್ಥಿಕ ಇತಿಹಾಸದಲ್ಲೂ ಇಸ್ಲಾಮಿಕ್ ಕೊಡುಗೆಗಳನ್ನು ಮುಖ್ಯವಾಹಿನಿಯಿಂದ ಹೊರಗಿಡಲಾಗಿದೆ.
ಪ್ರವಾದಿಯವರ ಕಾಲದಿಂದಲೇ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಹತ್ತಿರವಾದ ಉದ್ಯಮಗಳನ್ನು ನಾವು ಚರಿತ್ರೆಯ ಪುಟಗಳಲ್ಲಿ ಕಾಣಬಹುದು. ಮದೀನಾ ತಲುಪಿದ ಪ್ರವಾದಿ (ಸ.ಅ) ಮಸ್ಜಿದ್ ನಬವಿಯ ನಿರ್ಮಾಣದ ನಂತರ ಮಾಡಿದ ಮೊದಲ ಕಾರ್ಯವೆಂದರೆ ಮಾರುಕಟ್ಟೆಯನ್ನು (ಸೂಖ್) ಸ್ಥಾಪಿಸುವುದು. ಮದೀನಾದ ಅನ್ಸಾರಿಗಳು ಮತ್ತು ಮಕ್ಕಾದ ಮುಹಾಜಿರುಗಳ ನಡುವೆ ನಿರ್ಮಿಸಿದ ಸಹೋದರತ್ವದಿಂದ, ಮದೀನಾದಲ್ಲಿ ಆರ್ಥಿಕ ಚೇತರಿಕೆಯಲ್ಲಿ ಪ್ರಾಬಲ್ಯ ಹೊಂದಿದ್ದ ಯಹೂದಿಗಳೊಂದಿಗೆ ತಲುಪಲು ಮುಸ್ಲಿಮರಿಗೆ ನೆರವಾಯಿತು. ಬಡ್ಡಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಹುದಿಗಳ 'ಬನೂ ಖೈನಖಾಅ' ಮಾರುಕಟ್ಟೆಯಲ್ಲಾಾಗಿತ್ತು ಮುಸ್ಲಿಮರು ಆರಂಭದಲ್ಲಿ ವಾಣಿಜ್ಯ ವಹಿವಾಟುಗಳು ನಡೆಸುತ್ತಿದ್ದದ್ದು. ಬಡ್ಡಿ ರಹಿತ ಹಾಗೂ ಇಸ್ಲಾಮಿಕ ನಿಯಮಗಳನ್ನಾಧರಿಸಿ ಕಾರ್ಯನಿರ್ವಹಿಸುವ ಒಂದು ಮಾರುಕಟ್ಟೆಯ ಅಗತ್ಯವನ್ನು ಮನಗಂಡ ಪ್ರವಾದಿ (ಸ. ಅ) ಯಹೂದಿಗಳ ಮಾರುಕಟ್ಟೆಯ ಸಮೀಪವೇ ಒಂದು ಮಾರುಕಟ್ಟೆಯನ್ನು ಸ್ಥಾಪಿಸಲು ಮುಂದಾದರು. ಆದರೆ ಯಹೂದಿ ನಾಯಕ ಕಅಬ್ ಬಿನ್ ಅಶ್ರಫಿನ ವಿರೋಧ ಕಾರಣ ಅದನ್ನು ಅಲ್ಲಿಂದ ಅಲ್ಪ ವಿಶಾಲವಾದ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಯಿತು. ನಂತರ ಪ್ರವಾದಿ (ಸ. ಅ) ಹೇಳಿದರು "ಇದು ನಿಮ್ಮ ಮಾರುಕಟ್ಟೆಯಾಗಿದೆ ಇಲ್ಲಿ ನಿಮಗೆ ಮೂಲಸೌಕರ್ಯಗಳು ಕಡಿಮೆಯಾಗುವುದಿಲ್ಲ ಇದರ ಮೇಲೆ ಯಾವುದೇ ತೆರಿಗೆಯನ್ನು ವಸೂಲಿ ಮಾಡಲಾಗುವುದಿಲ್ಲ" (ಸುನನ್ ಇಬ್ನ್ ಮಾಜ). ಯಾವುದೇ ವಿಶೇಷ ಕಟ್ಟಡಗಳಿಲ್ಲದ ವಿಶಾಲವಾದ ಪ್ರದೇಶದಲ್ಲಾಗಿತ್ತು ಪ್ರವಾದಿ (ಸ. ಅ) ಮಾರುಕಟ್ಟೆಯನ್ನು ಸ್ಥಾಪಿಸಿದ್ದು, ಅಲ್ಲಿ ಯಾರಿಗೂ ಸ್ಥಳವನ್ನು ಮುಂಗಡವಾಗಿ ಮೀಸಲಿಡುತ್ತಿರಲಿಲ್ಲ, ಪ್ರತಿದಿನ ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ಸೌಕರ್ಯಗಳನ್ನು ನೀಡಲಾಗುತ್ತಿತ್ತು.
ಠೇವಣಿ ಬ್ಯಾಂಕಿಂಗ್ (Deposite banking)
ಗ್ರಾಹಕರ ಹಣವನ್ನು ಹೂಡಿಕೆಯಾಗಿ ತಮ್ಮಲ್ಲಿ ಸೂಕ್ಷಿಸುವುದು ಅದು ತಮ್ಮ ಲಾಭದಾಯಕವಾದ ವ್ಯವಹಾರಗಳಿಗೆ ಬಳಸುವುದು, ಗ್ರಾಹಕರು ಕೇಳಿದಾಗ ಅದನ್ನು ಮರುಪಾವತಿಸುವ ಹೂಡಿಕೆದಾರ ಬ್ಯಾಂಕಿಂಗ್ ವ್ಯವಸ್ಥೆ, ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಭೂತ ಚಟುವಟಿಕೆಗಳಲ್ಲವೇ. ಸಮಾನವಾದ ಆರ್ಥಿಕ ವಹಿವಾಟು ಅಥವಾ ಬ್ಯಾಂಕಿಂಗ್ ವ್ಯವಸ್ಥೆ ಪ್ರವಾದಿ (ಸ. ಅ) ರ ಕಾಲದಲ್ಲಿಯೇ ಚಾಲ್ತಿಯಲ್ಲಿದ್ದದ್ದನ್ನು ಇಸ್ಲಾಮಿಕ್ ಇತಿಹಾಸವು ಸಾರುತ್ತದೆ. ಪ್ರಮುಖ ಸ್ವಹಾಬಿವರ್ಯರಾದ ಝುಬೈರ್ ಬಿನ್ ಅಲ್ ಅವ್ವಾಂ (ರ.ಅ) ಈ ರೀತಿಯ ವ್ಯವಹಾರಗಳನ್ನು ನಡೆಸಿದ್ದರು. ಹಣವನ್ನು ಸುರಕ್ಷಿತವಾಗಿಡಲು ಜನರು ಅವರನ್ನು ಸಮೀಪಿಸಿದಾಗ ಝುಬೈರ್ (ರ.ಅ) ಆ ಹಣವನ್ನು ಅಮಾನತ್ ಆಗಿ ಸ್ವೀಕರಿಸುವ ಬದಲು ಸಾಲವಾಗಿಯಾಗಿತ್ತು ಸ್ವೀಕರಿಸುತ್ತಿದ್ದದ್ದು. ಹೀಗೆ ಮಾಡುವುದರಿಂದ, ಸಂಪತ್ತಿಗೆ ಯಾವುದಾದರೂ ರೀತಿಯಲ್ಲಿ ನಷ್ಟಗಳು ಸಂಭವಿಸಿದರೂ ಅದು ಮರುಪಾವತಿಸಬೇಕಾದ ಸಂಪೂರ್ಣ ಜವಾಬ್ದಾರಿ ಅವರ ಮೇಲಿರುತ್ತಿತ್ತು. ಅಲ್ಲದೆ ಅದೇ ಸಮಯ ಅದು ಉಪಯೋಗಿಸಿ ವ್ಯಾಪಾರ ಹಾಗೂ ಇತರ ವ್ಯವಹಾರಗಳು ನಡೆಸಲು ಕಾನೂನಾತ್ಮಕ ಅವಕಾಶ ಸಿಗುತ್ತಿತ್ತು. ಝುಬೈರ್ (ರ) ಅವರ ನಿಧನದ ಸಮಯದಲ್ಲಿ ಅವರ ಬಳಿಯಿದ್ದ ಇಂತಹ ಠೇವಣಿ ಮೊತ್ತವು 22 ಲಕ್ಷ ದಿರ್ಹಮ್ (ಅಂದಿನ ಬೆಳ್ಳಿ ನಾಣ್ಯ) ಆಗಿತ್ತು ಎಂದು ಇಬ್ನ್ ಸಅದ್ ಅವರು ತಮ್ಮ 'ತಬಖಾತ್' ಗ್ರಂಥದಲ್ಲಿ ದಾಖಲಿಸಿದ್ದಾರೆ. ಅವರ ಒಟ್ಟು ಆಸ್ತಿಯ ಮೌಲ್ಯ 50 ಮಿಲಿಯನ್ಗಿಂತಲೂ ಅಧಿಕವಾಗಿತ್ತು.
ಅವರ ಬ್ಯಾಂಕಿಂಗ್ ವ್ಯವಸ್ಥೆಯ ಶಾಖೆ ಎಂಬಂತೆ ಬಸ್ವರಾ, ಕೂಫಾ ಹಾಗೂ ಈಜಿಪ್ಟ್ ನಲ್ಲಿ ಇದ್ದ ಅವರ ಮನೆಯನ್ನು ಉಪಯೋಗಿಸುತ್ತಿದ್ದುದ್ದಾಗಿ ಕೆಲವು ಇತಿಹಾಸಗಾರರು ಉಲ್ಲೇಖಿಸುತ್ತಾರೆ. ಹೂಡಿಕೆ ಮಾಡಿದವರ ಹಣ ಮರುಪಾವತಿಸಲು ನಾಲ್ಕು ವರ್ಷಗಳ ಕಾಲ ಅವರ ಪಿತ್ರಾರ್ಜಿತ ಆಸ್ತಿ ಹಂಚಿಕೊಳ್ಳದೆ ಅವರ ಮಗ ಹಾಗೂ ಪ್ರಮುಖ ಸ್ವಹಾಬಿಯರೂ ಆದ ಅಬ್ದುಲ್ಲಾ ಕಾದು ಕುಳಿತದ್ದಾಗಿ ಚರಿತ್ರೆ ಸ್ಪಷ್ಟಪಡಿಸುತ್ತದೆ.
ಪಾವತಿ ಬ್ಯಾಂಕಿಂಗ್ (Payment banking)
ವಿವಿಧ ರೀತಿಯ ಪಾವತಿ ವ್ಯವಸ್ಥೆಯು ಬ್ಯಾಂಕಿಂಗ್ ನ ಪ್ರಧಾನ ಭಾಗವಾಗಿದೆ. ಚೆಕ್ ಗಳು, ಡಿಡಿಗಳು ಹಾಗೂ ಅದರ ಹೊಸ ರೂಪವಾದ ಕಾರ್ಡುಗಳು ಹಾಗೂ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ - ಇವೆಲ್ಲವೂ ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ವರ್ಗಾಯಿಸಲು ಹಾಗೂ ಬೇರೆಯವರಿಗೆ ಅತಿ ವೇಗದಲ್ಲಿ ವರ್ಗಾಯಿಸಲು ಆರ್ಥಿಕ ವಹಿವಾಟುಗಳು ಸಡಿಲಗೊಳಿಸಲು ನೆರವಾಗುತ್ತದೆ. ಕರೆನ್ಸಿ ವಿನಿಮಯ, ಟ್ರೇಡಿಂಗ್ ಹಾಗೂ ಇನ್ನಿತರ ಈ ತರಹದ ವ್ಯವಹಾರಗಳ ಭಾಗವಾಗಿದೆ. ವಾಸ್ತವವಾಗಿ ಇದರ ಪ್ರಾಥಮಿಕ ರೂಪಗಳನ್ನು ಇಸ್ಲಾಮಿನ ಆರಂಭಿಕ ಕಾಲದಲ್ಲೇ ನೋಡಬಹುದು.
ಮಕ್ಕಾದಲ್ಲಿ ವಾಸಿಸುತ್ತಿದ್ದ ಅಬ್ದುಲ್ಲಾ ಬಿನ್ ಝುಬೈರ್ (ರ) (ಮೇಲೆ ಸೂಚಿಸಿದ ಝುಬೈರ್ (ರ) ರ ಮಗ) ರವರು ಹಜ್ ಯಾತ್ರಿಕರಿಂದ ಮತ್ತು ವ್ಯಾಪಾರಿಗಳಿಂದ ದಿರ್ಹಮ್ಗಳನ್ನು ಸ್ವೀಕರಿಸಿ ತನ್ನ ಸಹೋದರ ಮಿಸ್ಅಬನಿಂದ ಅದರ ಬದಲು ದೀನಾರ್ ನೀಡಲು ಪತ್ರಗಳನ್ನು ಕಳುಹಿಸಿದ್ದರು. ಯಾತ್ರಿಕರು ಮತ್ತು ವ್ಯಾಪಾರಿಗಳು ಈ ಸೌಲಭ್ಯವನ್ನು ವ್ಯಾಪಕವಾಗಿ ಬಳಸುತ್ತಿದ್ದರು. ಇಬ್ನ್ ಅಬ್ಬಾಸ್ (ರ) ಅವರು ಕೂಡ ಇಂತಹ ವ್ಯವಹಾರಗಳನ್ನು ನಡೆಸುತ್ತಿದ್ದರು (ಇಮಾಮ್ ಸರ್ಖಸಿ – ಅಲ್ ಮಬ್ಸೂತ್).
ದಿನಾರ್(ಬಂಗಾರ) ಹಾಗೂ ದಿರ್ಹಂ(ಬೆಳ್ಳಿ) ನಡುವಿನ ವಿನಿಮಯಗಳೂ ಆ ಕಾಲದಲ್ಲಿ ನಡೆಯುತ್ತಿದ್ದವು. ಅಬ್ದುಲ್ಲಾಬಿನ್ ಉಮರ್ ಹೇಳುತ್ತಾರೆ "ನಾನು ಒಂಟೆಗಳನ್ನು ದೀನಾರಿನ ಮೌಲ್ಯಕ್ಕೆ ಅನುಗುಣವಾಗಿ ಮಾರಾಟ ಮಾಡುತ್ತಿದ್ದೆ, ನಂತರ ಅದರ ಬದಲಿಗೆ ದಿರ್ಹಮ್ಗಳನ್ನು ಸ್ವೀಕರಿಸುತ್ತಿದ್ದೆ (ಅಥವಾ ಪ್ರತಿಯಾಗಿ). ನಂತರ ಈ ವಿಷಯದಲ್ಲಿ ನನಗೆ ಸಂಶಯ ಉಂಟಾದಾಗ ಹಫ್ಸಾ (ರ) ರವರ ಮನೆಯಲ್ಲಿದ್ದ ಪ್ರವಾದಿ (ಸ.ಅ) ಯವರ ಬಳಿ ಹೋಗಿ ವಿಚಾರಿಸಿದೆ. ಆಗ ಪ್ರವಾದಿಯವರು ಹೇಳಿದರು "ದೀನಾರ್ ಮತ್ತು ದಿರ್ಹಮ್ಗಳನ್ನು ಅಂದಿನ ಮೌಲ್ಯಕ್ಕೆ ಅನುಸಾರವಾಗಿ, ಯಾವುದೇ ಬಾಕಿ ಉಳಿಸಿಕೊಳ್ಳದೆ ವ್ಯವಹಾರದ ಸ್ಥಳದಿಂದ ಹೊರಡುವ ಮೊದಲೇ ಸ್ವೀಕರಿಸುವುದಾದರೆ ಅದರಲ್ಲಿ ಯಾವುದೇ ತಪ್ಪಿಲ್ಲ' (ಅಲ್-ಮುಸ್ತದ್ರಕ್ – ಹಾಕಿಮ್)." ಕರೆನ್ಸಿಯ ದೈನಂದಿನ ಮೌಲ್ಯವನ್ನು ಸೂಚಿಸುವ ಈ ಹದೀಸ್ ಆರ್ಥಿಕ ವ್ಯವಹಾರಗಳಲ್ಲಿ ಇಸ್ಲಾಮಿಕ ಲೋಕ ಎಷ್ಟು ಮುಂದುವರಿದಿತ್ತು ಎಂದು ತಿಳಿಸಿಕೊಡುತ್ತದೆ.
ಸಫ್ತಜ' ಎಂದು ಕರೆಯಲ್ಪಡುವ ಹವಾಲಾ (ಹಣ ವರ್ಗಾವಣೆ) ವ್ಯವಸ್ಥೆಯು ನಂತರದ ಕಾಲದಲ್ಲಿ ಇಸ್ಲಾಮಿಕ್ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧವಾಗಿತ್ತು. ಬಸರಾ ಮತ್ತು ಕೂಫಾದಲ್ಲಿ 'ಸ್ವೈರಫಿ' ಎಂದು ಕರೆಯಲ್ಪಡುತ್ತಿದ್ದ ಖಾಸಗಿ ಹಣಕಾಸು ವ್ಯವಹಾರಗಾರರು ಹಣದ ವರ್ಗಾವಣೆ ಮತ್ತು ಲಭ್ಯತೆಯನ್ನು ನಿಯಂತ್ರಿಸುತ್ತಿದ್ದರು. ನೇರವಾಗಿ ಹಣವನ್ನು ಕೊಂಡೊಯ್ಯುವ ಬದಲಿಗೆ ಸ್ವೈರಫಿಗಳು ನೀಡುವ ಸಫ್ತಜಗಳ ಮೂಲಕ ವಿವಿಧ ಸ್ಥಳಗಳಲ್ಲಿ ಹಣವನ್ನು ವರ್ಗಾಯಿಸಲಾಗುತ್ತಿತ್ತು. 'ಸ್ವೈರಫಿ' ಎಂಬ ಪದದ ಮೂಲ 'ಸರಫ' ಆಗಿದೆ. ಇಂದಿಗೂ ಅರೇಬಿಕ್ ಭಾಷೆಯಲ್ಲಿ ಬ್ಯಾಂಕಿಂಗ್ಗೆ ಸಂಬಂಧಿಸಿದ ಪದಗಳಾದ ಮಸ್ರಫ್ (ಬ್ಯಾಂಕ್), ಸರ್ರಾಫ (ಹಣ ವಿನಿಮಯ), ಸರಾಫ್ (ಏ.ಟಿ.ಎಂ) ಮುಂತಾದವು ಇದೇ ಮೂಲದಿಂದ ಬಂದಿವೆ.
ವಿಶ್ವದ ಮೊದಲ ಚೆಕ್ನ ಇತಿಹಾಸವನ್ನು 18ನೇ ಶತಮಾನದ ಲಂಡನ್ನ ಅಕ್ಕಸಾಲಿಗನಿಗೆ ನಂಟು ಹಾಕುವ ಇತಿಹಾಸಕಾರರಿದ್ದಾರೆ. ಎಷ್ಟೋ ಶತಮಾನಗಳಿಗಿಂತ ಮುಂಚೆ (ಹಿಜ್ರಾ ನಾಲ್ಕನೇ ಶತಮಾನ) ಸಿರಿಯಾದ ಅಲೆಪ್ಪೋ ಪ್ರಾಂತ್ಯದ ಅಮೀರ್ ಆಗಿದ್ದ ಸೈಫುದ್ದೌಲಾ ಅಲ್-ಹಮ್ದಾನಿ ನೀಡಿದ ಒಂದು ಚೆಕ್ ನ ಕಥೆ ಈಜಿಪ್ಟಿನ ಖ್ಯಾತ ಲೇಖಕ ಅಹ್ಮದ್ ಅಮೀನ್ ಅವರು ತಮ್ಮ 'ದುಹ್ರುಲ್ ಇಸ್ಲಾಂ' ಎಂಬ ಗ್ರಂಥದಲ್ಲಿ ವಿವರಿಸುತ್ತಾರೆ. ವೇಷ ಬದಲಿಸಿ ಒಂದು ಮನೆಗೆ ತಲುಪಿದ ಅವರು ನೀಡಿದ ಕಾಗದದ ತುಣುಕನ್ನು ತೆಗೆದುಕೊಂಡು ಬಗ್ದಾದಿನ ಒಂದು ಸ್ವೈರಫಿ (ಹಣ ವಿನಿಮಯಗಾರ) ಯ ಬಳಿಗೆ ಕೊಂಡೊಯ್ದಾಗ ಮನೆ ಮಾಲೀಕನಿಗೆ ಸಾವಿರ ದೀನಾರ್ ಲಭಿಸಿತು. ಅದು ಸೈಫುದ್ದೌಲಾ ಅಲ್-ಹಮ್ದಾನಿಯವರೇ ನೀಡಿದ್ದು ಎಂದು ಆ ಸ್ವೈರಫಿ ತಿಳಿಸುತ್ತಾನೆ. ಈ ಘಟನೆಯು ಯುರೋಪಿಯನ್ನರು ಈ ತರಹದ ಒಂದು ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಚಿಂತಿಸುವ ಶತಮಾನಗಳಿಗೂ ಮುಂಚೆ ಇಸ್ಲಾಮಿಕ ಲೋಕದಲ್ಲಿ ಅದು ಅಸ್ತಿತ್ವದಲ್ಲಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ವಾಸ್ತವದಲ್ಲಿ 'ಚೆಕ್' ಎಂಬ ಪದದ ಮೂಲವೇ ಅರೇಬಿಕ್ನ 'ಸ್ವಕ್ಕ್' ಎಂಬ ಪದವಾಗಿದೆ.
ಸಾಲದ ವ್ಯವಹಾರಗಳು
ವ್ಯಾಪಾರಸ್ಥರಿಗೆ ಹಾಗೂ ಇತರ ಅಗತ್ಯವಿರುವವರಿಗೆ ಹಣ ಲಭಿಸುವಿಕೆ ಖಚಿತಪಡಿಸಲು ಅವರಿಗೆ ಹಣವನ್ನು ಸಾಲವಾಗಿ ನೀಡುವುದು ಇಂದಿನ ಬ್ಯಾಂಕುಗಳ ಪ್ರಧಾನ ಪ್ರಕ್ರಿಯೆಯಲ್ಲವೇ, ಇಸ್ಲಾಮಿನ ಆರಂಭಿಕ ವರ್ಷಗಳಲ್ಲಿ ಈ ಪ್ರಕ್ರಿಯೆ ಮುಸ್ಲಿಮರ ಸಾರ್ವಜನಿಕ ಖಜಾನೆಯಾದ "ಬೈತುಲ್ ಮಾಲ್" ನಿರ್ವಹಿಸುತ್ತಿತ್ತು. ಉಮರ್ (ರ) ಬೈತುಲ್ ಮಾಲ್ ನಿಂದ 80,000 ದಷ್ಟು ದಿರ್ಹಂ ಸಾಲ ಪಡೆದಿರುವುದಾಗಿ ಇತಿಹಾಸದ ವಿವಿಧ ಗ್ರಂಥಗಳಲ್ಲಿ ಕಾಣಬಹುದು. ಉಸ್ಮಾನ್ (ರ) ರವರ ಚರಿತ್ರೆಯಲ್ಲೂ ಇಂತಹ ಸಾಲದ ವ್ಯವಹಾರಗಳು ದಾಖಲಾಗಿವೆ. ಹೆಚ್ಚಾಗಿ ವ್ಯಾಪಾರ ಅವಶ್ಯಕ್ಕಾಗಿಯಾಗಿತ್ತು ಈ ಸಾಲ ತೆಗೆಯುವಿಕೆ. ಸಮಯಕ್ಕೆ ತಕ್ಕಂತೆ ಅದನ್ನು ಮರುಪಾವತಿಸಲು ಅವರು ಶ್ರದ್ಧೆ ವಹಿಸಿದ್ದರು. ಪ್ರಮುಖ ಸ್ವಹಾಬಿವರ್ಯರು ಕೂಡ ಈ ತರಹ ಸಾಲ ಪಡೆದಿದ್ದಾಗಿ ಕಾಣಬಹುದು.
ವ್ಯಾಪಾರಸ್ಥರ ಅಗತ್ಯಗಳಿಗಾಗಿ ಮತ್ತು ಸರ್ಕಾರದ ಕಾರ್ಯಗಳಿಗಾಗಿ ಸ್ವೈರಫಿಗಳು ಸಾಲ ನೀಡುತ್ತಿದ್ದರು. ಅಬ್ಬಾಸಿ ಖಲೀಫರಾಗಿದ್ದ ಅಲ್-ಮುಕ್ತದಿರ್ ನ ಹಣಕಾಸು ಮಂತ್ರಿಯಾಗಿದ್ದ ಅಲೀ ಬಿನ್ ಈಸ ಹಿಜ್ರ 4ನೇ ಶತಮಾನದಲ್ಲಿ ಸರ್ಕಾರ ನೌಕರರಿಗೆ ಸಂಬಳ ನೀಡಲು ಯಹೂದಿಗಳಾದ ಎರಡು ಸ್ವೈರಫಿಗಳಿಂದ ಮುಂಗಡವಾಗಿ ಹಣವನ್ನು ಪಡೆದು, ನಂತರ ಸರ್ಕಾರದ ಆದಾಯ ಬಂದಾಗ ಅದನ್ನು ಮರುಪಾವತಿಸುತ್ತಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಇಂದಿನ ಬ್ಯಾಂಕಿಂಗ್ ವ್ಯವಹಾರಗಳ ವಿವಿಧ ರೂಪಗಳನ್ನು ಇಸ್ಲಾಮಿಕ್ ಆಡಳಿತದ ಆರಂಭಿಕ ಕಾಲದಿಂದಲೇ ಅಸ್ತಿತ್ವದಲ್ಲಿದ್ದುದಾಗಿ ಕಾಣಬಹುದು. ಪ್ರತಿಯೊಂದು ಕಾಲಘಟ್ಟದಲ್ಲೂ ಜನರ ಅಗತ್ಯಕ್ಕೆ ತಕ್ಕಂತೆ ಇಸ್ಲಾಮಿಕ್ ಮೌಲ್ಯಗಳ ಆಧಾರದ ಮೇಲೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಆಯಾ ಕಾಲದ ಆಡಳಿತಗಾರರು ಮತ್ತು ಪಂಡಿತರು ಶ್ರಮಿಸಿದ್ದಾರೆ. ಆದ್ದರಿಂದಲೇ ಇಂತಹ ವ್ಯವಹಾರಗಳ ಕರ್ಮಶಾಸ್ತ್ರೀಯ (ಫಿಕ್ಹ್) ಮಾನ್ಯತೆಯ ಬಗ್ಗೆ ಪ್ರಾಚೀನ ಕಾಲದಿಂದಲೂ ಫಿಕ್ಹ್ ಗ್ರಂಥಗಳಲ್ಲಿ ವಿವರವಾದ ಚರ್ಚೆಗಳು ನಡೆಯುತ್ತಾ ಬಂದಿವೆ.
ಮೂಲ: ಮಲಯಾಳಂ
ಕನ್ನಡಕ್ಕೆ: ಅಜ್ವದ್ ಉಜಿರೆ