ಅಂದವಿಶ್ವಾಸ ಮುಕ್ತ ಸಮಾಜದ ಚಿಂತನೆ ಅನಿವಾರ್ಯ
ಪವಿತ್ರ ಖುರ್ಆನ್ ಹೇಳುತ್ತದೆ, ನೀವು ನೈಜ ವಿಶ್ವಾಸಿಗಳಾಗಿದ್ದರೆ ನೀವೇ ಉನ್ನತ ಸಮೂಹವಾಗಿರುವಿರಿ ಇಲ್ಲಿ ಉನ್ನತ ಎಂಬ ಪದವಿಗೆ ಅರ್ಹರಾಗಳು ನೈಜ ವಿಶ್ವಾಸ ಅನಿವಾರ್ಯ ಎಂಬುದು ಖುರ್ಆನಿನ ಸಂದೇಶವಾಗಿದೆ. ಪ್ರಪಂಚದ ಚರಿತ್ರೆಯನ್ನು ಸಿಂಹಾವಲೋಕನ ನಡೆಸುವಾಗ ಹಲವಾರು ಧರ್ಮ, ಸಂಸ್ಕೃತಿ, ತತ್ವಸಿದ್ದಾಂತಗಳು, ವಿಚಾರಧಾರೆಗಳು ಗೋಚರಗೊಳ್ಳುತ್ತವೆ. ಸಹಸ್ರಾರು ಧರ್ಮಗಳು ಚರಿತ್ರೆಯ ಪುಟಗಳಿಂದಲೇ ಅಳಿದು ಹೋಗಿದೆ, ಕೆಲವಂತೂ ಚರಿತ್ರೆಯನ್ನೇ ಕಂಡಿಲ್ಲ. ಈ ನಿಟ್ಟಿನಲ್ಲಿ ಇದರ ಕಾರಣಗಳನ್ನು ಕೆದಕುವಾಗ ಅಂಧವಿಶ್ವಾಸ, ಕಂದಾಚಾರಗಳಿಗೆ ಬಲಿಯಾಗಿ ತನ್ನ ಅಸ್ತಿತ್ವವನ್ನೆ ಕಳೆದುಕೊಂಡ ಉದಾಹರಣೆಗಳು ಕಾಣಸಿಗುತ್ತದೆ. ಧರ್ಮದ ಲೇಪ ಹಾಕಿ ನಡೆಸಲ್ಪಡುವ ಹಲವಾರು ಅನಾಚಾರಗಳು ನಮ್ಮ ಸಮಾಜದಲ್ಲಿ ನುಗ್ಗಿಕೊಂಡಿದೆ. ಅದರ ವಿರುದ್ದ ಸಮಾಜದಲ್ಲಿ ಸಮರ ಸಾರುವುದು ಉಲಮಾಗಳ ಕರ್ತವ್ಯವಾಗಿದೆ. ಈಮಾನ್ ಪರಿಪೂರ್ಣವಾಗಲು ಆರು ಸ್ತಂಭಗಳನ್ನು ನಂಬಲೇಬೇಕು. ಅದರ ಕೊನೆಯ ಸ್ತಂಭವಾಗಿದೆ ಒಳಿತು ಮತ್ತು ಕೆಡುಕುಗಳೆಲ್ಲವೂ ಅಲ್ಲಾಹನ ತೀರ್ಮಾನದಂತೆ ನಡೆಯುವುದು’ ಈ ವಿಶ್ವಾಸವು ಇಂದಿನ ಮುಸಲ್ಮಾನರಲ್ಲಿ ಬಹುತೇಕ ಕಮ್ಮಿಯಾದಂತೆ ಭಾಸವಾಗುತ್ತದೆ. ತಮ್ಮ ಜೀವನದಲ್ಲಿ ವ್ಯಾಪಾರ ಸಂಬಂಧವಾದ ವೈಯುಕ್ತಿಕ ಸಮಸ್ಯೆಗಳಿರಲಿ, ಕೌಟಂಬಿಕ, ಸಾಮಜಿಕ, ರಾಜಕೀಯ ಹೀಗೆ ಯಾವುದೇ ಸಮಸ್ಯೆಗಳು ಬಂದರೂ ಅದರ ಹಿಂದೆ ವಾಮಾಚಾರ, ಕಾಟಾಚಾರಗಳಿದೆ ಎಂದು ನಂಬಿ ಅಥವಾ ನಂಬಿಸಿ ಮೋಸಹೋಗುವ ದರಿದ್ರ ಸಮುದಾಯವಾಗಿ ಮಾರ್ಪಟ್ಟಿದೆ. ನಮ್ಮ ಸಮುದಾಯ ಮಾಟ-ಮಂತ್ರಗಳ ತಂತ್ರಿಕಾಯರಾಗಿ ನಾವು ನಶಿಸುತ್ತಿದ್ದೇವೆ. ಇಸ್ಮು, ಭಸ್ಮಗಳ ಹಿಂದೆ ಬಿದ್ದು ಭಸ್ಮಾಸುರರ ಅನುಯಾಯಿಗಳಾಗುತ್ತಿದ್ದೇವೆ. ಏನಾದರೂ ನಾಲ್ಕು ಗೀಟುಗಳನ್ನು ಎಳೆದು ಲೆಕ್ಕ ಹೇಳುವ ಮೋಸಗಾರರ ಬಲೆಯಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದೇವೆ. ವಿದೇಶ ಮರುಭೂಮಿಗಳಲ್ಲಿ ಕಷ್ಟಪಟ್ಟು ದುಡಿಯುವ ಗಲ್ಫ್ ಸಹೋದರರ ಬಹುದೊಡ್ಡ ಸಂಪತ್ತಿನ ಭಾಗವು ಈ ಮೋಸಗಾರರ ಪಾಲಾಗುತ್ತಿವೆ. ಇಂತಹ ಮೋಸದ ಜಾಲದಲ್ಲಿ ಸುಭವಾಗಿ ಬೀಳುವುದು ಮುಸ್ಲಿಂ ಮಹಿಳೆಯರೇ ಹೆಚ್ಚು. ಜ್ಯೋತಿಷ್ಯರನ್ನು ಸಂಪರ್ಕಿಸುವವರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಪ್ರವಾದಿ(ಸ.ಅ) ಹೇಳುತ್ತಾರೆ ಜ್ಯೋತಿಷ್ಯರನ್ನು ಸಂಪರ್ಕಿಸಿ ಅವರು ಹೇಳುವುದೆಲ್ಲವೂ ಸತ್ಯವೆಂದು ನಂಬುವ ವ್ಯಕ್ತಿಗೆ ರೋಗ ಬಂದರೆ ಆತನನ್ನು ನೀವು ಸಂದರ್ಶಿಸಬೇಡಿ’ ಕಾರಣ ಆತನಿಗೆ ಗಗನ ಲೋಕದಿಂದ ಎರಗುವ ಶಿಕ್ಷೆಯಲ್ಲಿ ನೀವು ಪಾಲುದಾರರಾಗುವಿರಿ. ರೋಗಿಗಳನ್ನು ಸಂದರ್ಶಿಸುವುದು ಬಹಳ ಪುಣ್ಯ ಕರ್ಮವಾಗಿದೆ ಎಂದು ಸಾರಿ ಹೇಳಿದ ಪ್ರವಾದಿ (ಸ.ಅ)ರು ಇಷ್ಟೊಂದು ಗೌರವವಾಗಿ ಹೀಗೆ ಹೇಳಿದರೆ ಅದರ ಪರಿಣಾಮ ನಾವು ತಿಳಿದು ಕೊಳ್ಳಬೇಕು. ಜ್ಯೋತಿಷ್ಯರನ್ನು ನಂಬುವವನು ಧರ್ಮಭ್ರಷ್ಟನು ಎಂಬ ನೆಬಿ ವಚನವು ಇದರ ಬಗ್ಗೆ ಬಹಳ ಸ್ಪಷ್ಟಪಡಿಸುತ್ತದೆ. ಇಸ್ಲಾಮಿನಲ್ಲಿ ಮಂತ್ರ, ಆಧ್ಯಾತ್ಮಿಕ ಚಿಕ್ಸಿತೆ ಇಲ್ಲ ಎಂದಲ್ಲ. ಆದರೆ ನಕಲಿಗಳು ತುಂಬಿ ತುಳುಕುತ್ತಿರುವ ಇಂದಿನ ದಿನಗಳಲ್ಲಿ ಅಸಲಿಗಳನ್ನು ಕಂಡು ಹಿಡಿಯುವುದು ಬಹಳ ಕಷ್ಟ. ಆದುದರಿಂದ ಬಹಳ ಜಾಗರೂಕತೆಯಿಂದ ಧರ್ಮದ ಮರ್ಮಗಳನ್ನು ಅರಿತು ಹೆಜ್ಜೆಗಳನ್ನು ಮುಂದಿಡಬೇಕು. ದರ್ಮದ ಹೆಸರಲ್ಲಿ ಜೇಬು ತುಂಬಿಸುವ ಕ್ರೂರರನ್ನು ಕಂಡು ಹಿಡಿಯುವುದು ಬಹಳ ಕಷ್ಟ. ಧರ್ಮದ ಹೆಸರಲ್ಲಿ ಜೇಬು ತುಂಬಿಸುವ ನಕಲಿಗಳನ್ನು ಕಂಡುಹಿಡಿದು ಬಡವಾಗುತ್ತಿರುವ ಸಮುದಾಯವನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ಉಲಮಾ-ಉಮರಾಗಳು ಆಲೋಚಿಸಬೇಕು. ಗ್ರೂಫ್, ಪಂಗಡಗಳಿಂದ ಪೂರ್ವಾಗ್ರಹ ಪೀಡಿತರಾಗದೆ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಎಲ್ಲಾ ಪಿಡುಗುಗಳ ವಿರುದ್ದ ದ್ವನಿ ಎತ್ತದಿದ್ದರೆ ಅದನ್ನು ಇಲ್ಲಿನ ಕೆಲವೊಂದು ಕ್ಷುದ್ರ ಶಕ್ತಿಗಳು ಹೈಜಾಕ್ ಮಾಡಿ ಪ್ರಚಾರ ಪಡಿಸುತ್ತ್ತಾರೆ.
-ಸತ್ಯದಾರ ಮಾಸಿಕ