ನನ್ನ ಬದುಕು ಬೆಳಗಿದ ಇಸ್ಲಾಮ್ ಧರ್ಮ?!
ಇಸ್ಲಾಮ್ ಸ್ವೀಕರಿಸಿದ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ರ ನಾದಿನಿ ಲಾರೆನ್ ಬೂತ್ ಹೇಳಿಸ ಸತ್ಯ?! ಫೆಲೆಸ್ತೀನ್‌ಗೆ ನನ್ನ ಮೊದಲ ಭೇಟಿಯನ್ನು ನೀಡಿ, ಐದು ವರ್ಷಗಳೇ ಕಳೆದವು. ಗಾಝಾ ಹಾಗೂ ಪಶ್ಚಿಮದಂಡೆಯಲ್ಲಿರುವ ಸೇವಾಸಂಸ್ಥೆಗಳಲ್ಲಿ ದುಡಿಯಲೆಂದು ಆ ಪ್ರದೇಶಕ್ಕೆ ಹೋಗುವಾಗ ಬಡ ಮುಸ್ಲಿಂ ಸ್ತ್ರೀಯರಿಗಿಂತ ತಾವು ಶ್ರೇಷ್ಠರೆಂಬ ಸಾಮಾನ್ಯ ಮಧ್ಯಮವರ್ಗದ ಶ್ವೇತ ಜನಾಂಗೀಯ ಮಹಿಳೆಯರಿಗಿರುವ ಜಂಭ ನನ್ನಲ್ಲೂ ಮನೆ ಮಾಡಿತ್ತು. ಮುಸ್ಲಿಂ ಮಹಿಳೆಯರೆಂದರೆ, ಕಪ್ಪು ಉಡುಗೆ ತೊಟ್ಟಿರುವ, ವೌನವಾಗಿದ್ದು ಬಿಡುವ ಅಸಹಾಯಕರೆಂಬ ಭಾವನೆ ನನ್ನಲ್ಲಿತ್ತು. ಎಲ್ಲ ಸ್ವಾತಂತ್ರಗಳನ್ನು ಅನುಭವಿಸುತ್ತಿರುವ ಪಾಶ್ಚಾತ್ಯ ಮಹಿಳೆಯಾದ ನಾನು, ವೃತ್ತಿಪರವಾಗಿ ಪುರುಷರೊಂದಿಗೆ ಮಾತ್ರವೇ ವ್ಯವಹರಿಸಬೇಕಾಗುವುದೆಂದು ನಿರೀಕ್ಷಿಸಿದ್ದೆ. ಏನಿದ್ದರೂ, ಮುಸ್ಲಿಂ ಜಗತ್ತು ಎಂದರೆ ಹೀಗೆ ಅಲ್ಲವೇ ಎಂದು ನಾನು ಯೋಚಿಸಿದ್ದೆ, ಸರಿಯಲ್ಲವೇ?. ನಾನು ಇಸ್ಲಾಮ್ ಧರ್ಮ ಸ್ವೀಕರಿಸಿದ ಸುದ್ದಿ ಕೇಳಿದ ಸಹ ಅಂಕಣ ಬರಹಗಾರರು ಆಕಾಶವೇ ತಲೆಗೆ ಬಿದ್ದವರಂತೆ ಚೀರುತ್ತಿರುವುದು, ಪ್ರಸ್ತುತ ವಿಶ್ವದಾದ್ಯಂತ ಇಸ್ಲಾಮ್ ಧರ್ಮವನ್ನು ಅನುಸರಿಸುತ್ತಿರುವ ೫೦ ಕೋಟಿಗೂ ಅಧಿಕ ಮಹಿಳೆಯರ ಬಗ್ಗೆ ಹೊಂದಿರುವ ಅವರಿಗಿರುವ ಪೂರ್ವಾಗ್ರಹ ಪೀಡಿತ ದೃಷ್ಟಿಕೋನಕ್ಕೆ ಸ್ಪಷ್ಟ ಪುರಾವೆಯಾಗಿದೆ. ಜಗತ್ತಿನಾದ್ಯಂತದ ಮುಸ್ಲಿಂ ಮಹಿಳೆಯರ ಬದುಕಿನ ಬಗ್ಗೆ ಮರುಕದ ಸುರಿಮಳೆಯನ್ನೇ ಸುರಿಸಲು, ನಾನು ಇಸ್ಲಾಮ್ ಧರ್ಮ ಸ್ವೀಕರಿಸಿದ್ದು ಅವರಿಗೆ ಒಂದು ನೆಪವಾಯಿತು. ಇಸ್ಲಾಮ್ ಸಮುದಾಯವಾಗಿರಲಿ ಅಥವಾ ಬೇರೇ ಜನಾಂಗಗಳಾಗಿರಲಿ, ಜಗತ್ತಿನ ಹಲವಾರು ನಗರಗಳಲ್ಲಿ ಹಾಗೂ ಸಂಸ್ಕೃತಿಗಳಲ್ಲಿ ಮಹಿಳೆಯರು ಪುರುಷರಿಂದ ಶೋಷಣೆಗೊಳಗಾಗುತ್ತಿರುವುದನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲ. ಹೀಗೆ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರು ಪುರುಷರಿಂದ ಶೋಷಿತರಾಗುತ್ತಿ ದ್ದಾರೆಯೇ ಹೊರತು ದೇವರಿಂದಲ್ಲ. ಕೆಲವು “ಇಸ್ಲಾಮಿಕ್” ದೇಶಗಳಲ್ಲಿರುವ ಬಹುತೇಕ ಸಂಪ್ರದಾಯ, ಆಚರಣೆಗಳು, ಇಸ್ಲಾಮ್‌ನ ಮೂಲ ತತ್ವಗಳಿಂದ ದೂರಸರಿದಂತಹವು (ಅಥವಾ ಯಾವುದೇ ಸಂಬಂಧವಿಲ್ಲದಂತಹವು). ಅದಕ್ಕೆ ಬದಲಾಗಿ ಸಾಂಸ್ಕೃತಿಕ ಅಥವಾ ಪಾರಂಪರಿಕ (ಹೌದು, ಪುರುಷ ಪ್ರಧಾನ) ಪದ್ಧತಿ ಗಳನ್ನು ಆಧರಿಸಿದ ಆಚರಣೆಗಳನ್ನು, ಈ ಸಮಾಜಗಳಲ್ಲಿ ಹೇರಲಾಗಿದೆ. ಈ ವರ್ಷದ ಸೆಪ್ಟ್ಟಂಬರ್‌ನಲ್ಲಿ ನಾನು ಇರಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಸಂದರ್ಶಿಸಿದ ಮಸೀದಿಗಳಲ್ಲಿ ನಾನು ಮಾಡಿದ ನಮಾಝ್‌ಗಳು ಹಾಗೂ ಪವಿತ್ರ ಖುರ್‌ಅನ್ ಸೂಕ್ತಿಗಳ ಪಠಣವು, ಇಸ್ಲಾಂ ಧರ್ಮದ ಬಗ್ಗೆ ಪಾಶ್ಚಾತ್ಯರು ಹೊಂದಿರುವ ಭಾವನೆಗಳನ್ನು ನನಗೆ ನೆನಪಿಸಿತು. ಮುಸ್ಲಿಮರ ಪ್ರಾರ್ಥನೆಗಳಲ್ಲಿ ಶಾಂತಿ ಹಾಗೂ ಸಂತೃಪ್ತಿಗಳು ಪ್ರತಿಧ್ವನಿಸುತ್ತವೆ. ಮುಸ್ಲಿಮರ ಪ್ರಾರ್ಥನೆಗಳು “ಬಿಸ್ಮಿಲ್ಲಾ ಹಿರ್ರೂಹ್ಮಾನಿರ್ರೂಹೀಂ” (ದಯಾನಿಧಿಯೂ, ಕರುಣಾಳುವೂ ಆದ ಅಲ್ಲಾಹುವಿನ ಹೆಸರಿನಲ್ಲಿ) ಎಂದು ಆರಂಭಗೊಳ್ಳುತ್ತವೆ. ಮುಸ್ಲಿಮರು ಪರಸ್ಪರ ಭೇಟಿಯಾದ ಸಂದರ್ಭದಲ್ಲಿ “ಅಸ್ಸಲಾಂ ಅಲೈಕುಂ ವ ರಹ್ಮ್ಮತುಲ್ಲಾಹಿ ವ ಬರಕಾತುಹು” -ಅಲ್ಲಾಹುವಿನ ಶಾಂತಿ ಮತ್ತು ಅನುಗ್ರಹ ನಿಮಗಿರಲಿ ಎಂದು ಹಾರೈಸುತ್ತಾರೆ. ಬಹುತೇಕ ನನಗೆ ಗೊತ್ತಿಲ್ಲದಂತೆ ನಾನು ಕಳೆದ ವರ್ಷದಿಂದ “ಪ್ರಿಯ ದೇವರೇ” ಎನ್ನುವ ಬದಲು “ಪ್ರಿಯ ಅಲ್ಲಾಹು” ಎಂದು ಹೇಳತೊಡಗಿದೆ.ಅವರೆಡೂ ಒಂದೇ ಅರ್ಥವನ್ನು ಹೊಂದಿರುವುದೇನೂ ಹೌದು. ಆದರೆ ಇಸ್ಲಾಮ್ ಸ್ವೀಕರಿಸಲು ನನಗೆ ಆ ಧರ್ಮದ ಪವಿತ್ರ ಪ್ರಾರ್ಥನೆಗಳು ಮತ್ತು ಕುರ್‌ಆನ್ ಗ್ರಂಥದ ಭಾಷೆಯ ಬಗ್ಗೆ ನನಗಿರುವ ಅಜ್ಞಾನ ದೊಡ್ಡ ಅಡ್ಡಿಯಾಗಿತ್ತು. ಆದರೆ ನನ್ನ ಗಮನಕ್ಕೆ ಬಾರದಂತೆ ನಾನು ಆ ತೊಂದರೆಯಿಂದ ನಿವಾರಣೆಗೊಂಡೆ. ಇತರ ಮುಸ್ಲಿಂ ಬಾಂಧವರ ಒಡನಾಟದಲ್ಲಿ ನನಗೆ ಮುಕ್ತತೆ ಹಾಗೂ ಆತ್ಮೀಯತೆಯ ಭಾವನೆ ಮೂಡಿತು. ಮುಸ್ಲಿಮರು ನೈಜ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಅವರು ಅನುಭವಿಸುವಂತಹ ಸುಮಧುರ ಸೌಹಾರ್ದತೆಯ ಭಾವನೆಯು ನನ್ನಲ್ಲೂ ಮೂಡಲಾರಂಭಿಸಿತು. ಇರಾನ್‌ನಲ್ಲಿರುವ ಮಸೀದಿಯಲ್ಲಿ ನಾನು ವಿಧ್ಯುಕ್ತವಾಗಿ ನನ್ನ ಮುಂಗೈಗಳನ್ನು, ಮುಖ, ತಲೆ ಹಾಗೂ ಕಾಲನ್ನು ನೀರಿನಿಂದ ತೊಳೆದು ಪ್ರಾರ್ಥಿಸಿದೆ. ಅದು ಸರಳವಾದ ಆಚರಣೆಯಾಗಿದೆ. ಕೊನೆಗೂ, ಕೆಲವು ವಾರಗಳ ಹಿಂದೆ ಲಂಡನ್‌ನ ಮಸೀದಿಯೊಂದರಲ್ಲಿ, ಶೇಖ್ ಒಬ್ಬರ ಸಮ್ಮುಖ ನಾನು ಇಸ್ಲಾಮ್ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಈ ಮಾನ್ನು ಹೇಳಿದ್ದರು. “ಅವಸರ ಬೇಡ ಲಾರೆನ್, ಇದನ್ನು ಹಗುರವಾಗಿ ಪರಿಗಣಿಸು. ಅಲ್ಲಾಹು ನಿನಗಾಗಿ ಕಾಯುತ್ತಿದ್ದಾನೆ. ಇತರರು ನಿನ್ನ ಬಗ್ಗೆ ಏನು ಹೇಳುತ್ತಾರೆಂಬುದನ್ನು ಕಡೆಗಣಿಸು.ನಿನ್ನ ಸ್ವಭಾವದಂತೆ ನಡೆ. ಪವಿತ್ರ ಕುರ್‌ಆನ್‌ನ್ನು ಅನುಸರಿಸು. ಅಲ್ಲಾಹು ನಿನಗೆ ಮಾರ್ಗದರ್ಶನ ಮಾಡುವನು” ಎಂದವರು ಹೇಳಿದ್ದರು. ಇದೀಗ ನನ್ನ ಬೆಳಗ್ಗಿನ ದಿನಚರಿಯು, ಮುಂಜಾನೆ ೬:೦೦ ಗಂಟೆಯ ಹೊತ್ತಿಗೆ ನಮಾಝ್‌ನೊಂದಿಗೆ ಆರಂಭಗೊಳ್ಳುತ್ತದೆ. ಕೊನೆಯ ಪ್ರಾರ್ಥನೆಯು ರಾತ್ರಿ ೧೦:೩೦ಕ್ಕೆ ಅಂತ್ಯಗೊಳ್ಳುತ್ತದೆ. ಕುರ್‌ಅನ್ ಅಧ್ಯಯನದಲ್ಲಿ ನಾನು ನಿರಂತರ ಪ್ರಗತಿಯನ್ನು ಸಾಧಿಸುತ್ತಿದ್ದೇನೆ. ನಾನು ಅಯಾತೊಲ್ಲಾಗಳು, ಇಮಾಮ್‌ಗಳು ಹಾಗೂ ಶೇಖ್‌ಗಳಿಂದ ಸಲಹೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಇವರೆಲ್ಲರೂ ಕೂಡಾ ಪ್ರತಿಯೊಬ್ಬನು ತಮ್ಮದೇ ಆದ ರೀತಿಯಲ್ಲಿ ಇಸ್ಲಾಮ್‌ನೆಡೆಗೆ ಪ್ರಯಾಣವನ್ನು ಆರಂಭಿಸುತ್ತಾರೆಂದು ಹೇಳಿದ್ದರು. ಈ ಹಿಂದೆ, ಮದ್ಯಪಾನವನ್ನು ತೊರೆಯುವ ನನ್ನ ಎಲ್ಲ ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಇಸ್ಲಾಮ್ ಸ್ವೀಕರಿಸಿದ ಬಳಿಕ ನಾನು ಮದ್ಯ ಸೇವನೆಯನ್ನು ಕನಸಿನಲ್ಲಿ ಕೂಡಾ ಯೋಚಿಸಲು ಸಾಧ್ಯವಾಗಲಿಲ್ಲ. ಇಸ್ಲಾಂನಲ್ಲಿ ಕಲಿಯಲು, ಸಂತೋಷ ಹೊಂದಲು ಮತ್ತು ಮೆಚ್ಚಿಕೊಳ್ಳುವಂಹ ಅಸಂಖ್ಯ ವಿಷಯಗಳಿವೆ. ಕಳೆದ ಕೆಲವು ದಿನಗಳಲ್ಲಿ ನನಗೆ ಇಸ್ಲಾಮ್‌ಗೆ ಮತಾಂತರಗೊಂಡ ಇತರ ಮಹಿಳೆಯರಿಂದಲೂ ಕರೆಗಳು ಬಂದಿದ್ದವು. ತಾವು ಮತಾಂತರಗೊಂಡ ೧೦ರಿಂದ ೨೦ ವರ್ಷಗಳ ನಂತರವೂ ಇಸ್ಲಾಮ್ ಕುರಿತ ಪ್ರೀತಿ ಏರಿಕೆಯಾಗುತ್ತಲೇ ಹೋಯಿತೆಂದು ಅವರು ನನಗೆ ತಿಳಿಸಿದರು. ಬಿಬಿಸಿಯಲ್ಲಿ ಮಧ್ಯಪ್ರಾಚ್ಯದ ಯಾವುದಾದರೂ ದೇಶದ ಮುಸ್ಲಿಮರು “ಅಲ್ಲಾಹು ಅಕ್ಬರ್” ಎಂದು ಆಕಾಶದೆಡೆಗೆ ಮುಖ ಮಾಡಿ ದೊಡ್ಡ ಧ್ವನಿಯಲ್ಲಿ ಹೇಳುವುದನ್ನು ನೋಡಿದಾಗ “ನಾವು ಪಾಶ್ಚಿಮಾತ್ಯರನ್ನು ವಿಪರೀತ ದ್ವೇಷಿಸುತ್ತೇವೆ ಹಾಗೂ ಅವರನ್ನು ಆತ್ಮಹತ್ಯಾ ಬಾಂಬರ್‌ಗಳಾಗಿ ಕೊಂದು ಬಿಡುತ್ತೇವೆ” ಎಂದು ಆ ಮುಸ್ಲಿಮರು ಹೇಳುತ್ತಿದ್ದಾರೇನೋ ಎಂದೇ ನಾವು ಪಾಶ್ಚಿಮಾತ್ಯರು ಭಾವಿಸುತ್ತೇವೆ. ವಾಸ್ತವವಾಗಿ ಮುಸ್ಲಿಮರು, ‘ದೇವನು ಮಹೋನ್ನತನು’(ಅಲ್ಲಾಹು ಅಕ್ಬರ್) ಎಂದೇ ಹೇಳುತ್ತಿದ್ದಾರೆ. ಹಾಗೆ ಹೇಳುವ ಮೂಲಕ ಮುಸ್ಲಿಮೇತರ ರಾಷ್ಟ್ರಗಳು ನಮ್ಮ ಗ್ರಾಮಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲೂ ನಮ್ಮ ಯಾತನೆಯಲ್ಲೂ ಸಂತೃಪ್ತಿ ಪಟ್ಟುಕೊಳ್ಳುತ್ತೇವೆ. ಸಾಮಾನ್ಯವಾಗಿ ಈ ಪದವು ನಮ್ಮ ನೆರೆಹೊರೆಯವರೊಂದಿಗೆ, ಮುಸ್ಲಿಮರು, ಮುಸ್ಲಿಮೇತರರ ಜೊತೆಗೆ ಶಾಂತಿಯಿಂದ ಬದುಕಬೇಕೆಂಬ ಮುಸ್ಲಿಮರ ಇಚ್ಛೆಯನ್ನು ಸಾರುತ್ತದೆ. ‘ದಿ ಗಾರ್ಡಿಯನ್’ ಪತ್ರಿಕೆಗೆ ಬರೆದ ಲೇಖನ ಲಾರೆನ್ ಬೂತ್ ಕುರಿತು ಒಂದಿಷ್ಟು?. ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್‌ರ ಪತ್ನಿ ಚೆರಿ ಬ್ಲೇರ್‌ರ ಸಹೋದರಿಯಾಗಿರುವ ಬೂತ್, ಇತ್ತೀಚೆಗೆ ಇರಾನ್ ಪ್ರವಾಸ ಸಂದರ್ಭದಲ್ಲಿ ತನ್ನ ಕೆಥೋಲಿಕ್ ನಂಬಿಕೆಯನ್ನು ಬದಲಿಸಿ ಇಸ್ಲಾಂ ಧರ್ಮ ಸ್ವೀಕರಿಸಿರುವುದಾಗಿ ಅವರು ಘೋಷಿಸಿಕೊಂಡಿದ್ದಾರೆ.ಇರಾನ್ ಮೂಲದ ೨೪ ಗಂಟೆಗಳ ಇಂಗ್ಲಿಷ್ ಚಾನೆಲ್‌ನಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಮಾನವ ಹಕ್ಕು ಕಾರ್ಯಕರ್ತೆಯಾಗಿರುವ ಲಾರೆನ್ ಬೂತ್, ಇಂಗ್ಲೆಂಡ್‌ನಲ್ಲಿ ನಡೆದ ‘ಜಾಗತಿಕ ಶಾಂತಿ ಮತ್ತು ಒಗ್ಗಟ್ಟು-೨೦೧೦’ ವಿಚಾರ ಸಂಕಿರಣದಲ್ಲಿ ಹಲವು ಮುಸ್ಲಿಂ ಮುಖಂಡರ ಎದುರು ‘ತಾನು ಇಸ್ಲಾಂ ಧರ್ಮ ಸ್ವೀಕರಿಸುವುದಾಗಿ’ ಘೋಷಿಸಿದ್ದರು. ಆರು ವಾರಗಳ ಹಿಂದೆ ತಾನು ಇರಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಸ್ಲಿಮರ ಪ್ರಾರ್ಥನಾ ಮಂದಿರದಲ್ಲಿ ತನಗೆ ಒಳ್ಳೆಯ ಅನುಭವ ಉಂಟಾಗಿದ್ದರಿಂದ ತಾನು ಇಸ್ಲಾಂ ಸ್ವೀಕರಿಸಿದ್ದೇನೆ. ಪ್ರತಿದಿನ ಐದು ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಆಗಾಗ ಮಸೀದಿಗೆ ತೆರಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. ನಾನು ಮದ್ಯಪಾನವನ್ನು ತ್ಯಜಿಸಿದ್ದು, ಹಂದಿ ಮಾಂಸ ಸೇವನೆಯನ್ನು ತೊರೆದಿದ್ದೇನೆ. ಅವುಗಳನ್ನು ಇನ್ನೆಂದಿಗೂ ಸೇವಿಸುವುದಿಲ್ಲ. ಪ್ರತಿ ದಿನ ಕುರ್‌ಆನ್ ಪಠಿಸುತ್ತಿದ್ದೇನೆ. ನನ್ನ ನಿರ್ಧಾರ ವಿವಾದಗಳನ್ನು ಸೃಷ್ಟಿಸಿದ್ದು, ಪ್ರತಿಯೊಂದು ಕ್ರಿಯೆಗೂ ಸಹಜವಾಗಿಯೇ ಪ್ರತಿಕ್ರಿಯೆಗಳು ಬರುತ್ತವೆ ಎಂದು ಲಾರೆನ್ ಬೂತ್ ಹೇಳಿದ್ದಾರೆ.