ಉಳ್ಹಿಯ್ಯತ್ : ಶ್ರೇಷ್ಠ ಕರ್ಮ
ಪರಿಶುದ್ಧ ಇಸ್ಲಾಂ ದೀನಿನಲ್ಲಿ ಅತ್ಯಂತ ಪವಿತ್ರವಾದ ತಿಂಗಳಲ್ಲಿ ಒಂದಾಗಿದೆ ದುಲ್-ಹಿಜ್ಜಾ ತಿಂಗಳು. ಶಹಾದತ್, ಉಪವಾಸ, ಹಜ್ಜ್, ನಮಾಜ್ ಮತ್ತು ಸ್ವದಖ ಹೀಗೆ ಇಸ್ಲಾಮಿನ ಐದು ಕಾರ್ಯಗಳು ಒಟ್ಟಾಗಿ ಸೇರುವ ತಿಂಗಳು ದುಲ್-ಹಿಜ್ಜಾ. ದುಲ್-ಹಿಜ್ಜಾದ ಪ್ರತಿ ದಿನವೂ ಪವಿತ್ರವಾಗಿದೆ. ಅದರಲ್ಲಿಯೂ ತಿಂಗಳ ಮೊದಲ ಹತ್ತು ದಿನ ಅತ್ಯಂತ ಉದಾತ್ತವಾಗಿದೆ. ಸಾಧ್ಯವಾದಷ್ಟು ಒಳ್ಳೆಯ ಸತ್ಕರ್ಮಗಳನ್ನು ಹೆಚ್ಚಿಸಬೇಕಾದ ಹತ್ತು ದಿನಗಳು ಇವು ಎಂದು ವಿವಿಧ ಹದೀಸುಗಳಲ್ಲಿ ಸ್ಪಷ್ಟವಾಗಿದೆ. ಪ್ರವಾದಿ (ಸ.ಅ) ರವರು ಹೇಳುತ್ತಾರೆ: ದುಲ್-ಹಿಜ್ಜಾ ಹತ್ತು ದಿನಗಳಿಗಿಂತ ಆರಾಧನೆಯಲ್ಲಿ ಅಲ್ಲಾಹನಿಗೆ ಹೆಚ್ಚು ಇಷ್ಟವಾದ ಬೇರೆ ದಿನವಿಲ್ಲ. ಇಸ್ಲಾಮಿನ ಐದು ಕಾರ್ಯಗಳು ಒಟ್ಟಾಗಿ ಸೇರುವ ತಿಂಗಳು ದುಲ್-ಹಿಜ್ಜಾ. ಬೇರೆ ಯಾವ ತಿಂಗಳು ಈ ವೈಶಿಷ್ಟವನ್ನು ಹೊಂದಿಲ್ಲ. ಇಮಾಮ್ ಬುಖಾರಿ (ರ) ಹೇಳುತ್ತಾರೆ: "ಇಬ್ನ್ ಉಮರ್ (ರ), ಅಬೂ ಹುರೈರಾ (ರ) ಮತ್ತು ಇತರ ಸ್ವಹಾಬಿಗಳು ಈ ಹತ್ತು ದಿನಗಳಲ್ಲಿ ತಕ್ಬೀರ್ ಹೇಳುತ್ತಾ ಹೊರಗಡೆ ನಡೆದಾಡುತ್ತಿದ್ದರು. ದುಲ್-ಹಿಜ್ಜಾ ಹತ್ತು ದಿನಗಳಲ್ಲಿ ನೀವು ತಕ್ಬೀರ್, ತಹ್ಲೀಲ್, ತಹ್ಮೀದ್ ಹೆಚ್ಚಿಸಬೇಕು ಎಂದು ಪ್ರವಾದಿ ವಚನವಿದೆ. ಹೀಗೆ ಹಲವಾರು ಶ್ರೇಷ್ಠತೆ, ಸತ್ಕರ್ಮ ಒಳಗೊಂಡ ತಿಂಗಳಾಗಿದೆ ಇದು.
ಈ ಸತ್ಕರ್ಮಗಳಲ್ಲಿ ಅತ್ಯಂತ ಶ್ರೇಷ್ಠತೆಯುಳ್ಳ ಸತ್ಕರ್ಮವಾಗಿದೆ ಉಳ್ಹಿಯ್ಯತ್ ಎಂಬುವುದು. ತನ್ನ ಮಗನನ್ನು ವಧೆ ಮಾಡುವ ಅಲ್ಲಾಹನ ಅಜ್ಞಾಪನೆಯ ಮುಂದೆ ಪ್ರವಾದಿ ಇಬ್ರಾಹಿಂ ನಬಿ (ಅ) ಕುಗ್ಗದೆ ಮುಂದೆ ಸಾಗಿದ ಸಂಕೇತವಾಗಿ ಈ ದಿನದಂದು ವಿಶ್ವದಾದ್ಯಂತ ಉಳ್ಹಿಯ್ಯತ್ ಅನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಪವಿತ್ರ ಕಾರ್ಯ ಆಚರಣೆಯಲ್ಲಿ ಹಸಿವಿನಿಂದ ಬಳಲುತ್ತಿರುವ ತನ್ನ ಸಹೋದರನೂ ಸಂತೋಷದಲ್ಲಿ ಪಾಲ್ಗೊಳ್ಳಬೇಕೆಂಬ ಸಂದೇಶವನ್ನಾ ಇದು ಸಾರುತ್ತಿದೆ. ಅಲ್ಲಾಹನ ತೃಪ್ತಿ ಆಗ್ರಹಿಸಿ ದುಲ್-ಹಿಜ್ಜಾ ಹತ್ತರ ಸೂರ್ಯೋದಯದಿಂದ ಆಯ್ಯಾಮು ತಶ್ರೀಕ್ (ದುಲ್-ಹಿಜ್ಜಾ 11,12,13) ದಿನಗಳಲ್ಲಿ ಆಡು, ಹಸು ಮತ್ತು ಒಂಟೆ ಎಂಬಿತ್ಯಾದಿ ಪ್ರಾಣಿಗಳಿಂದ ಬಲಿಕೊಡುವ ಜೀವಿಗಳಿಗೆ ಉಳ್ಹಿಯ್ಯತ್ ಎನ್ನುತ್ತಾರೆ. ಪೆರ್ನಾಲ್ ದಿನದ ಳುಹಾ ಸಮಯದಿಂದ ಆರಂಭವಾಗುವುದರಿಂದ ಇದನ್ನು ಉಳ್ಹಿಯ್ಯತ್ ಎಂದು ಕರೆಯಲಾಗುತ್ತದೆ (ಬುಜೈರಿಮ 4:276). ಇದು ಮುಅಕ್ಕದ್ ಆದ ಸುನ್ನತ್ ಆಗಿದೆ. ಪ್ರವಾದಿ ನಬಿ (ಸ) ರವರು ತಮ್ಮ ಕೈಯ್ಯಾರೆ ಬಿಳಿ ಕೊಂಬಿನ ಎರಡು ಮೇಕೆಗಳನ್ನು ಬಲಿ ಅರ್ಪಿಸಿದ ಚರಿತ್ರೆ ಇಮಾಂ ಮುಸ್ಲಿಂ ವರದಿ ಮಾಡಿದ್ದಾರೆ.
ಉಳ್ಹಿಯ್ಯತ್ ಕರ್ಮದಲ್ಲಿ ಪಾಲಿಸಬೇಕಾದ ಕಾರ್ಯಗಳು
ಬಲಿ ಪೆರ್ನಾಲ್ ದಿನ ಮತ್ತು ಅಯ್ಯಾಮು ತಶ್ರೀಕ್ ( ದುಲ್-ಹಿಜ್ಜಾ 11,12,13) ಮೂರು ದಿನಗಳ ತನ್ನ ಮತ್ತು ತನ್ನ ಆಶ್ರಯಿತರಿಗೆ ಬೇಕಾಗುವ ಖರ್ಚಿನಿಂದ ಉಳಿಕೆ ಬಂದ ಹಣದಿಂದ ಪ್ರಾಯ ತುಂಬಿದ ಎಲ್ಲಾ ಸ್ವತಂತ್ರ್ಯ ನಾದ ಪ್ರಬುದ್ದ ಮುಸ್ಲಿಮರಿಗೆ ಉಳ್ಹಿಯ್ಯತ್ ಮುಅಕ್ಕದಾದ ಸುನ್ನತ್ತಾಗಿದೆ. ನಬಿ (ಸ.ಅ) ರವರಿಗೆ ಉಳ್ಹಿಯ್ಯತ್ ಕಡ್ಡಾಯವಾಗಿತ್ತು. ಬಲಿದಾನ ನೀಡಲು ಸಮರ್ಥನಾಗಿದ್ದವನು ಉಳ್ಹಿಯ್ಯತ್ ನೀಡದಿರುವುದು ಕರಾಹತ್ತಾಗಿದೆ. ಪೂರ್ಣವಾಗಿ ನ್ಯೂನತೆಗಳಿಂದ ಮುಕ್ತವಾಗಿರುವ ಎರಡು ವಯಸ್ಸಾದ ಮೇಕೆ ಬಲಿ ನೀಡಬೇಕು. ಜಾನುವಾರು (ಹೋರಿ, ದನ,ಎತ್ತು,ಎಮ್ಮೆ) ಎರಡು ವಯಸ್ಸು ಪೂರ್ತಿಯಾಗಿ ಮೂರನೇ ವರ್ಷಕ್ಕೆ ಕಾಲಿಟ್ಟಿರಬೇಕು. ಎರಡು ವಯಸ್ಸು ಪೂರ್ತಿಯಾಗದಿದ್ದರೂ ಹಲ್ಲು ಉದುರಿದರೆ ಸಾಕು, ಕಾರಣ ಇದು ಪ್ರಾಯ ಪೂರ್ತಿಯಾದ ಗುರುತಾಗಿದೆ. ಒಂಟೆಯನ್ನು ಬಲಿ ನೀಡುವುದಾದರೆ ಐದು ವರ್ಷ ಪೂರ್ತಿಯಾಗಿ ಆರನೇ ವರ್ಷಕ್ಕೆ ಪ್ರವೇಶಿಸಬೇಕು (ತುಹ್ಫ 9/348-349). ಕನಿಷ್ಠ ಒಂದು ಆಡು ಅಥವಾ ಒಂದು ಒಂಟೆ ಅಥವಾ ಒಂದು ದನ ನೀಡುವುದಾಗಿದೆ ಉಳ್ಹಿಯ್ಯತ್. ದನ ಮತ್ತು ಒಂಟೆಯಲ್ಲಿ ಕನಿಷ್ಠ ಒಬ್ಬ ಗರಿಷ್ಠ ಏಳು ಮಂದಿ ಪಾಲು ಸೇರಿ ಉಳ್ಹಿಯ್ಯತ್ ನೀಡಬಹುದು. ಪ್ರವಾದಿ(ಸ.ಅ) ರು ನೂರು ಒಂಟೆಗಳನ್ನು ಬಲಿ ಅರ್ಪಿಸಿದ ಚರಿತ್ರೆ ಹದೀಸುಗಳಲ್ಲಿ ಕಾಣಬಹುದು. ಒಂದು ಒಂಟೆಯನ್ನು ಬಲಿ ಅರ್ಪಿಸುವುದಕ್ಕಿಂತ ಏಳು ಆಡುಗಳನ್ನು ಬಲಿ ಅರ್ಪಿಸುವುದಾಗಿದೆ ಹೆಚ್ಚು ಪುಣ್ಯ. ಒಂದು ಒಂಟೆಯಲ್ಲಿ ಪಾಲು ಹೊಂದುವುದಕ್ಕಿಂತ ಒಂದಾಡನ್ನು ಸ್ವಂತವಾಗಿ ಬಲಿ ನೀಡುವುದಾಗಿದೆ ಉತ್ತಮ ಎಂದು ಗ್ರಂಥಗಳಲ್ಲಿ ಕಾಣಬಹುದು.
ಉಳ್ಹಿಯ್ಯತ್ತಿಗೆ ನಿಯ್ಯತ್ತು ಅನಿವಾರ್ಯವಾಗಿದೆ. "ಸುನ್ನತ್ತಾದ ಉಳ್ಹಿಯ್ಯತ್ ನಾನು ನೀಡುತ್ತೇನೆ” ಎಂದು ಸಂಕಲ್ಪಿಸಬೇಕು. ಕೇವಲ "ಉಳ್ಹಿಯ್ಯತ್" ( ಸುನ್ನತ್ತಾದ ಎಂದು ಉಚ್ಚರಿಸದೆ) ಮಾತ್ರ ಎಂದು ನಿಯ್ಯತ್ ಮಾಡಿದರೆ ಅದು ಕಡ್ಡಾಯವಾಗಿ ಮಾರ್ಪಡುತ್ತದೆ. ಮಾತ್ರವಲ್ಲ ಅದರ ಕಿಂಚಿತ್ತು ಮಾಂಸ ತಿನ್ನುವುದು ನೀಡುವವರಿಗೆ ಹರಾಮ್ ಆಗುತ್ತದೆ. ಉಳ್ಹಿಯ್ಯತ್ ಸಮಯ ಬಲಿ ಪೆರ್ನಾಲ್ ದಿನದಂದು ಸುರ್ಯೋದಯದ ಬಳಿಕ ಪ್ರಾರಂಭವಾಗುತ್ತದೆ. ಉಳ್ಹಿಯ್ಯತ್ತಿನ ಉತ್ತಮವಾದ ಸಮಯ ಎರಡು ರಕಅತ್ ನಮಾಜ್ ಎರಡು ಕುತ್ಬಾ ನಿವ೯ಹಿಸುವ ಸಮಯ ಕಳೆದ ನಂತರವಾಗಿದೆ. ಅಯ್ಯಾಮು ತಶ್ರೀಕ್ ( ದುಲ್-ಹಿಜ್ಜಾ 11,12,13) ದಿನದ ಮಗ್ರಿಬ್ ಸಮಯದೊಂದಿಗೆ ಮುಕ್ತಾಯವಾಗುತ್ತದೆ. ಅತ್ಯವಶ್ಯಕವಲ್ಲದೆ (ಕಾರಣವಿಲ್ಲದೆ) ರಾತ್ರಿ ದ್ಹಬಹ್ ಮಾಡುವುದು ಕರಾಹತ್ತಾಗಿದೆ. ಬಲಿ ನೀಡುವವನ ಮನೆಯಲ್ಲಿ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಬಲಿ ಅರ್ಪಿಸುವುದು ಪುಣ್ಯವಾದ ಕರ್ಮ. ಆದರೆ ಬಲಿ ನೀಡುವವನ ಊರಿನಲ್ಲಾಗಿರಬೇಕೆಂದೇನೂ ಇಲ್ಲ. ಮತ್ತೊಂದು ಊರಿನಲ್ಲಿ ಮೃಗ ಖರೀದಿಸಿ ಅಲ್ಲಿಯೇ ದ್ಹಬಹ್ ಮಾಡಿ ವಿತರಿಸಲು ಹಣ ಕೊಟ್ಟು ಕಳುಹಿಸಲು ಸಹ ಅನುಮತಿ ಇದೆ.
ಸುನ್ನತ್ತಾದ ಉಳ್ಹಿಯ್ಯತ್ ನಿಂದ ಅಲ್ಪ ಬಡವರಿಗಾಗಿ ನೀಡಲು ಕಡ್ಡಾಯವಾಗಿದೆ. ಪೂರ್ತಿ ನೀಡುವುದಾಗಿದೆ ಉತ್ತಮ. ಬರಕತ್ತಿಗಾಗಿ ಕರುಳು(ಲಿವರ್) ತೆಗೆದಿಡಲು ಸುನ್ನತ್ತಾಗಿದೆ. ಕಾರಣ ಪ್ರವಾದಿ (ಸ.ಅ) ರು ಉಳ್ಹಿಯ್ಯತ್ ನ ಕರಳು(ಲಿವರ್) ಭಕ್ಷಿಸುತ್ತಿದ್ದರು.