ಶಿಕ್ಷಣ ಸಂಸ್ಥೆಗಳು ಸೌಹಾರ್ದತೆಯ ಕೇಂದ್ರಗಳು
ಇಲ್ಲಿ ಮುಸ್ಲಿಮರಿಗೆ ಮಸೀದಿ, ಕ್ರೈಸ್ತರಿಗೆ ಚರ್ಚ್ , ಹಿಂದೂಗಳಿಗೆ ದೇವಸ್ಥಾನ ಎಂಬ ಆರಾಧನಾಲಯಗಳಿವೆ. ಆದರೆ ಈ ಎಲ್ಲಾ ಧರ್ಮದವರನ್ನು ಒಟ್ಟು ಸೇರಿಸುವ ತಾಣವೆಂದರೆ ವಿದ್ಯಾಲಯ.
ವಿದ್ಯಾಲಯದಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲ. ವಿದ್ಯಾರ್ಥಿಗಳೆಡೆಯಲ್ಲೂ ಅಂತಹ ಒಂದು ಕಲ್ಪನೆಯೇ ಇರುವುದಿಲ್ಲ. ನಿರ್ಮಲ ಮನಸ್ಸಿನ ಆ ಮಕ್ಕಳ ಎದೆಯೊಳಕ್ಕೆ ಮತೀಯ ಧ್ವೇಷದ ಅನಿಲ ತುಂಬಿಸಿ ವಾತಾವರಣ ಕೆಡಿಸಿ ರಾಜಕೀಯ ಲಾಭ ಕೊಯ್ಯಲೆತ್ನಿಸುವ ಕೆಲವು ಸಂಘಟನೆಗಳ ದುಷ್ಕೃತ್ಯದಿಂದಾಗಿ ಕೆಲವು ಕಡೆ ಸೌಹಾರ್ದತೆ ಕೆಡುವ ಪ್ರಕರಣಗಳನ್ನು ಹೊರತು ಪಡಿಸಿದರೆ ಸಾಮಾನ್ಯವಾಗಿ ಹಿಂದಿನ ಕಾಲದಿಂದ ಇಂದಿನ ವರೆಗೆ ವಿದ್ಯಾರ್ಥಿಗಳೆಡೆಯಲ್ಲಿ ಕೋಮುಧ್ವೇಷ , ಮತೀಯ ತಾರತಮ್ಯ ಎಂಬ ಕಲ್ಪನೆ ಕೂಡಾ ಇರುವುದಿಲ್ಲ. ಒಂದಾಗಿ ಕೂತು, ಒಂದಾಗಿ ಕಲಿತು, ಕಲೆತು, ಆಟವಾಡಿ , ಪರಸ್ಪರ ಸಹಾಯ ಸಹಕಾರ ನೀಡುತ್ತಾ ವಿದ್ಯಾರ್ಥಿ ಜೀವನ ನಡೆಸುತ್ತಿದ್ದಾರೆ.
ಈ ಸುಂದರ ವಾತಾವರಣವನ್ನು ಯಥಾಸ್ಥಿತಿ ಕಾಯ್ದುಕೊಂಡು ವಿದ್ಯಾರ್ಥಿಗಳ ಮುಂದಿನ ನಿಜ ಜೀವನದಲ್ಲೂ ಈ ಆಶಯ ನೆಲೆಯೂರುವಂತೆ ಮಾಡಬೇಕಾದುದು ವಿದ್ಯಾಲಯಗಳ ಕರ್ತವ್ಯವಾಗಿದೆ. ಆದರೆ ದುರದೃಷ್ಟವಶಾತ್ ಕೋಮುವಾದಿಗಳ ಸ್ವಾಧೀನದಲ್ಲಿರುವ ಕೆಲವು ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮತೀಯ ಧ್ವೇಷ ತುಂಬುವ ಕೆಲಸ ನಡೆಯುತ್ತಿದೆ. ಈ ಧ್ವೇಷವು ಅವರ ಮನದಲ್ಲಿ ಶಾಶ್ವತವಾಗಿ ನೆಲೆಯೂರುವುದರಿಂದ ಮುಂದೆ ನಿಜ ಜೀವನದಲ್ಲಿ ಅದರ ದುಷ್ಪರಿಣಾಮ ಹೊರಬೀಳುತ್ತದೆ. ಇದರಿಂದ ಏನಾಗುತ್ತದೆ. ಆ ವಿದ್ಯಾರ್ಥಿಯ ಭವಿಷ್ಯತ್ತು ಕೂಡಾ ಹಾಳಾಗುತ್ತದೆ. ಉತ್ತಮ ನಾಗರಿಕನಾಗಿ ಸಮಾಜದಲ್ಲಿ ಗೌರವಯುತನಾಗಿ ಬಾಳಬೇಕಾದವನು ಕೇಸುಗಳನ್ನು ಮೈಮೇಲೆ ಎಳೆದು ಹಾಕಿಕೊಂಡು ಸೆರೆಮನೆಯಲ್ಲಿ ಕೊಳೆಯಬೇಕಾಗುತ್ತದೆ. ಇದಕ್ಕೆ ಹೊಣೆ ಅವನ ಮನದಲ್ಲಿ ವಿಷ ತುಂಬಿಸಿದ್ದ ವಿದ್ಯಾಲಯವಾಗಿದೆ.
ಮಗನ ಭವಿಷ್ಯತ್ತು ರೂಪಿಸಲೆಂದು ಶ್ರಮದ ಫಲವನ್ನು ಖರ್ಚು ಮಾಡಿ ಅಂತಹ ವಿದ್ಯಾಲಯಗಳಿಗೆ ಸೇರಿಸಿದ ಹೆತ್ತವರ ಕನಸನ್ನು ಭಗ್ನಗೊಳಿಸಿದ ಪಾಪ ಅವರಿಗೆ ತಟ್ಟುತ್ತದೆ. ಒಬ್ಬನ ಮನದಲ್ಲಿ ಕೋಮು ಧ್ವೇಷವನ್ನು ಯಾರೇ ತುಂಬಿದರೂ ಅದು ಅವನ ಒಳಿತಿಗಾಗಿರುವುದಿಲ್ಲ. ಅದು ಅವನನ್ನು ಕೊಲೆ ಮಾಡಿದ ಹಾಗೆ. ಕಾರಣ, ಅವನ ಮನದಲ್ಲಿ ತುಂಬಲಾಗಿರುವ ಕೋಮು ಧ್ವೇಷವು ಅವನನ್ನು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ ಒಂದೋ ಜೈಲು ಪಾಲಾಗುತ್ತಾನೆ, ಅಥವಾ ಪ್ರತೀಕಾರದ ಕೊಲೆಗೆ ಗುರಿಯಾಗುತ್ತಾನೆ. ಎಲ್ಲಾ ವಿದ್ಯಾಲಯಗಳೂ ಇದನ್ನು ಅರಿತುಕೊಂಡಿರಬೇಕು.
ಕೆಲವು ಶಾಲಾ, ಕಾಲೇಜುಗಳ ವ್ಯವಸ್ಥಾಪಕರು ತಾವು ಸೇರಿಕೊಂಡಿರುವ ರಾಜಕೀಯ ಪಕ್ಷಗಳ ಸೇವೆಗಾಗಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ಆದರೆ ದುರಂತಕ್ಕೆ ಬಲಿಯಾಗುವುದು ಮಾತ್ರ ಬಡಪಾಯಿ ವಿದ್ಯಾರ್ಥಿಗಳು. ರಾಜಕೀಯ ಲಾಭ ಕೊಯ್ಲು ನಡೆಸಿ ಹಣ ಸಂಪಾದಿಸಿದವರ ಮಕ್ಕಳು ದೇಶ ವಿದೇಶಗಳ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸುರಕ್ಷಿತರಾಗಿರುತ್ತಾರೆ. ಅವರಿಗೆ ಆ ಅನುಕೂಲ ಮಾಡಿಕೊಟ್ಟ ಬಲಿಪಶು ವಿದ್ಯಾರ್ಥಿಗಳು ಜೈಲಲ್ಲಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳೂ ಇದನ್ನು ಗಮನದಲ್ಲಿಟ್ಟಿರಬೇಕು. ತಮ್ಮ ಸ್ವಂತ ಭವಿಷ್ಯತ್ತು ರೂಪಿಸಿಕೊಳ್ಳುವ ವಿಷಯವನ್ನು ಮಾತ್ರ ಗಮನದಲ್ಲಿಟ್ಟಿರಬೇಕು. ತಮ್ಮ ಹೆತ್ತವರು ಕಷ್ಟಪಟ್ಟು ದುಡಿದ ಹಣವನ್ನು ತಮಗಾಗಿ, ತಮ್ಮ ಉತ್ತಮ ಭವಿಷ್ಯತ್ತಿಗಾಗಿ ಖರ್ಚು ಮಾಡುತ್ತಿದ್ದಾರೆ, ಆದ್ದರಿಂದ ಅವರ ಕನಸನ್ನು ನನಸು ಮಾಡಬೇಕು, ಯಾರದೋ ಐಷಾರಾಮದ ಜೀವನಕ್ಕಾಗಿ ತಾನು ಬಲಿಪಶುವಾಗಬಾರದು ಎಂಬ ಒಂದು ಪ್ರಜ್ಞೆ ಸದಾ ಜಾಗೃತವಾಗಿರಬೇಕು.
ಇತಿಹಾಸದಲ್ಲಿ ನಡೆದ ಚರಿತ್ರೆಗಳನ್ನು ತಿರುಚಿ ಒಂದು ಧರ್ಮದವರ ಮೇಲೆ ವೈರಾಗ್ಯಭಾವ ಮೊಳಕೆಯೊಡಿಸುವಂತಹ ಪಠ್ಯಗಳನ್ನು ಓದುತ್ತಿರುವಾಗ ಆ ಪಠ್ಯದ ವಿಷಯವನ್ನು ಸತ್ಯ ಎಂದು ತೀರ್ಮಾನಿಸಬಾರದು. ಇದು ಒಂದು ಕೋಮು ರಾಜಕೀಯದವರು ಸೃಷ್ಟಿಸಿದ ಸುಳ್ಳು ಎಂಬುದನ್ನು ತಿಳಿದುಕೊಂಡು ನಿಜ ಇತಿಹಾಸವನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಕೊಡಗಿನ ಹಿಂದೂ ರಾಜರುಗಳ ಮೇಲೆ ಟಿಪ್ಪು ಸುಲ್ತಾನರು ದೌರ್ಜನ್ಯ ಎಸಗಿದರೆಂಬ ಚರಿತ್ರೆ ಕೋಮುವಾದಿಗಳು ಸೃಷ್ಟಿಸಿದ್ದ ಕಟ್ಟುಕಥೆ ಎಂಬುದನ್ನು ನಿಜವಾದ ಹಿಂದೂಗಳಾದ ಕೆಲವು ಇತಿಹಾಸಗಾರರು ಸಾಬೀತು ಪಡಿಸಿದ್ದಾರೆ. ಟಿಪ್ಪುವಿನಿಂದ ಅನ್ಯಾಯಕ್ಕೊಳಗಾದನೆಂದು ಹೇಳಲಾಗಿದ್ದ ಕೊಡಗಿನ ಹಿಂದೂ ರಾಜನು ಟಿಪ್ಪು ಸುಲ್ತಾನರ ಮರಣದ ನಂತರದವರು ಎಂಬ ಸತ್ಯಾವಸ್ಥೆಯನ್ನು ದಾಖಲೆ ಸಮೇತ ರುಜುವಾತು ಪಡಿಸಿದ್ದಾರೆ.
ಚರಿತ್ರೆಯಲ್ಲಿ ಕೋಮುವಾದಿಗಳು ಕಲಬೆರಕೆ ಮಾಡುತ್ತಿದ್ದಾರೆ ಎಂಬದು ಸತ್ಯ ಎನ್ನುವುದಕ್ಕೆ ಇದೊಂದು ಉದಾಹರಣೆ ಮಾತ್ರ. ಇಂತಹ ಎಷ್ಟೋ ಉದಾಹರಣೆಗಳನ್ನು ನಮಗೆ ಕಾಣಲು ಸಾಧ್ಯ. ಇತಿಹಾಸದಲ್ಲಿ ಒಂದು ರಾಜ್ಯವನ್ನು ಇನ್ನೊಂದು ರಾಜ್ಯದ ಅರಸ ಆಕ್ರಮಿಸಿ ಸ್ವಾಧೀನ ಪಡಿಸುವುದು ವಾಡಿಕೆಯಾಗಿತ್ತು. ಭಾರತದ ಇತಿಹಾಸದಲ್ಲಿ ಅದೆಷ್ಟೋ ಯುದ್ಧಗಳು ನಡೆದಿವೆ. ಹೆಚ್ಚಿನವು ಹಿಂದೂ ರಾಜರುಗಳ ನಡುವೆ ನಡೆದ ಯುದ್ಧಗಳು. ಅಶೋಕ ಚಕ್ರವರ್ತಿ ಹಿಂದೂ ರಾಜ ಆಳುತ್ತಿದ್ದ ಕಳಿಂಗ ರಾಜ್ಯವನ್ನು ಮುತ್ತಿಗೆ ಹಾಕಿ ಎರಡೂವರೆ ಲಕ್ಷ ಹಿಂದೂಗಳನ್ನು ಕೊಂದು ಐದು ಲಕ್ಷ ಹಿಂದೂಗಳಿಗೆ ಗಾಯ ಗೊಳಿಸಿ ರಕ್ತದ ಕಾಲುವೆ ಹರಿಸಿದ್ದ ಭೀಕರ ಇತಿಹಾಸ ನಮ್ಮ ಮುಂದಿದೆ. ಇಮ್ಮಡಿ ಪುಲಿಕೇಶಿ ಮತ್ತು ಮಂಗಳೇಶನ ನಡುವೆ ಯುದ್ಧ, ಪಲ್ಲವರು ಮತ್ತು ಚಾಲುಕ್ಯರ ನಡುವೆ ಯುದ್ದ, ಚಾಲುಕ್ಯ ಮತ್ತು ಗಂಗರ ನಡುವೆ ಯುದ್ಧ ಮುಂತಾದ ಹಿಂದೂ - ಹಿಂದೂಗಳ ನಡುವೆ ನಡೆದ ಘೋರ ಯುದ್ಧಗಳನ್ನು ಇತಿಹಾಸ ಸಾರುತ್ತಿದೆ.
ಕ್ರಿ.ಶ. 642 ರಲ್ಲಿ ಹರ್ಷವರ್ಧನ ಮತ್ತು ಇಮ್ಮಡಿ ಪುಲಿಕೇಶಿಯ ಮಧ್ಯೆ ನಡೆದ ಘೋರ ಕದನವು ನಮಗೆಲ್ಲ ಗೊತ್ತೇ ಇದೆ. ಆ ಕಾಲದಲ್ಲಿ ಯುದ್ಧಗಳು ರಾಜ್ಯ, ಅಧಿಕಾರ, ಐಶ್ವರ್ಯದ ಕೊಳ್ಳೆಗಾಗಿ ನಡೆಯುತ್ತಿತ್ತು. ಅಲ್ಲಿ ಧಾರ್ಮಿಕ ಭಾವನೆ ಇದ್ದಿರಲಿಲ್ಲ. ಅದೇ ಭಾವದಿಂದ ಕೆಲವು ಮುಸ್ಲಿಮ್ ರಾಜರುಗಳು ನಡೆಸಿದ್ದ ಯುದ್ಧಗಳನ್ನು ಮಾತ್ರ ಹಿಂದೂಗಳ ವಿರುದ್ಧ ಆಕ್ರಮಣ ಎಂದು ಚರಿತ್ರೆಯನ್ನು ಕೋಮುವಾದಿಗಳು ತಿರುಚಿರುತ್ತಾರೆ. ಅಂದಿನ ಮುಸ್ಲಿಮ್ - ಮುಸ್ಲಿಮ್ ದೊರೆಗಳ ನಡುವೆಯೂ ಹಿಂದೂ ಹಿಂದೂ ದೊರೆಗಳ ನಡುವೆಯೂ ಯುದ್ಧ ನಡೆಯುತ್ತಿದ್ದುದು ಆ ಯುದ್ಧಗಳಲ್ಲಿ ಕೋಮು ಭಾವನೆ ಇದ್ದಿರಲಿಲ್ಲ ಐಶ್ವರ್ಯಗಳ ಲೂಟಿ ಮಾತ್ರವೇ ಇದ್ದುದು ಎಂಬುದಕ್ಕೆ ಸಾಕ್ಷಿಯಾಗಿದೆ. ಆದರೆ ಇದನ್ನು ಕೋಮು ಯುದ್ಧಗಳಾಗಿ ಚಿತ್ರಿಸಿ ವಿದ್ಯಾರ್ಥಿಗಳ ಮನದಲ್ಲಿ ಒಂದು ಕೋಮಿನವರ ಮೇಲೆ ಧ್ವೇಷ ಹುಟ್ಟಿಸುವ ಷಡ್ಯಂತ್ರ ನಡೆಯುತ್ತಿದೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸತ್ಯ ಕಂಡು ಹಿಡಿಯಲು ಪ್ರಯತ್ನಿಸಬೇಕು. ಕೆಲವು ವಿದ್ಯಾಲಯಗಳಲ್ಲಿರುವ ಅಧ್ಯಾಪಕರೂ ಕೂಡಾ ಕೋಮು ಸಂಕುಚಿತ ಭಾವನೆಯುಳ್ಳವರಾಗಿದ್ದಾರೆ. ಇತಿಹಾಸವನ್ನು ತಿರುಚಿ ಹೇಳುವ ಅಧ್ಯಾಪಕರ ಮನಸಿನ ರೋಗವನ್ನು ಗ್ರಹಿಸಿಕೊಳ್ಳುವ ಪ್ರಜ್ಞೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು.
ಇಡೀ ವಿಶ್ವವೇ ಕೊಂಡಾಡಿದ ಭಾರತದ ವಿವಿಧತೆಯಲ್ಲಿ ಏಕತೆಯ ಸ್ವರೂಪ, ಸುಂದರವಾದ ಜಾತ್ಯಾತೀತ ನೀತಿಯನ್ನು ಉಳಿಸುವ ಪ್ರಯತ್ನ ವಿದ್ಯಾಲಯಗಳಲ್ಲಿ ನಡೆಯಬೇಕಿದೆ. ಸರಕಾರ, ಶಾಲಾ ಮೇನೇಜ್ ಮೆಂಟ್ , ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದಕ್ಕೆ ಪೂರ್ಣ ಸಹಕಾರ ನೀಡಬೇಕು. ಒಂದು ಸ್ವಾರ್ಥ ಹಿತಾಸಕ್ತ ರಾಜಕೀಯ ಪಕ್ಷವು ತಮ್ಮ ಅಧಿಕಾರ, ಹಣ, ಐಷಾರಾಮಕ್ಕಾಗಿ ವಿದ್ಯಾಲಯಗಳಲ್ಲಿ ಕೋಮು ವಿಷ ಬೀಜ ಬಿತ್ತುವುದನ್ನು ವಿಫಲಗೊಳಿಸಬೇಕು. ಈ ರಾಜಕೀಯ ಪಕ್ಷ ಹುಟ್ಟುವ ಮುನ್ನ ಭಾರತದಲ್ಲಿದ್ದ ಮತೀಯ ಸೌಹಾರ್ದತೆ, ಕೋಮು ಸಾಮರಸ್ಯೆ , ಸಹಬಾಳ್ವೆಯನ್ನು ಮರಳಿ ತರುವ ಪ್ರಯತ್ನ ವಿದ್ಯಾಲಯಗಳಲ್ಲಿ ನಡೆಯಬೇಕಾಗಿದೆ.
ಮಾಡನ್ನೂರು ನೂರುಲ್ ಹುದಾ ವಿದ್ಯಾಲಯವು ಈ ಪ್ರಯತ್ನವನ್ನು ಮಾಡುತ್ತಾ ಬಂದಿದೆ. ಇಲ್ಲಿನ ಪಠ್ಯ - ಪಠ್ಯೇತರ ಚಟುವಟಿಕೆಗಳನ್ನು ಆ ನಿಟ್ಟಿನಲ್ಲಿ ಅಳವಡಿಸಲಾಗಿದೆ.ಭಾರತ ದೇಶದ ಜಾತ್ಯಾತೀತ ಸುಂದರ ಸ್ವರೂಪವನ್ನು ಯಥಾಸ್ಥಿತಿ ನೆಲೆಗೊಳಿಸುವಂತಹ ಭಾವನೆಗಳನ್ನು ವಿದ್ಯಾರ್ಥಿಗಳಲ್ಲಿ ಪಡಿಮೂಡಿಸುತ್ತಿರುವ ಚೆಮ್ಮಾಡ್ ದಾರುಲ್ ದಾರುಲ್ ಹುದಾ ಯೂನಿವರ್ಸಿಟಿಯ ಆಶವನ್ನು ಅದರ ಅಂಗ ಸಂಸ್ಥೆ ಎಂಬ ನೆಲೆಯಲ್ಲಿ ಮಾಡನ್ನೂರು ದಾರುಲ್ ಹುದಾ ಅನುಸರಿಸಿಕೊಂಡು ಬರುತ್ತಿದೆ. ನನ್ನ ತಾಯಿ ಹಿಂದಿನ ಧರ್ಮದಲ್ಲೇ ಇದ್ದಾರೆ, ನಾನು ಮುಸ್ಲಿಮನಾಗಿರುತ್ತೇನೆ, ಮುಸ್ಲಿಮನಾದ ನಾನು ಅನ್ಯಮತೀಯಳಾದ ತಾಯಿಯ ಸೇವೆ ಮಾಡಬಹುದೇ ಎಂದೊಬ್ಬರು ಅನುಯಾಯಿ ಕೇಳಿದಾಗ ಸೇವೆ ಮಾಡಲೇ ಬೇಕು, ಅವಳು ಅನ್ಯ ಮತೀಯಳಾದಳೂ ನಿನಗೆ ತಾಯಿ ಅಲ್ಲದವಳಾಗುವುದಿಲ್ಲ ಎಂದು ಉತ್ತರ ಕೊಟ್ಟಿದ್ದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಮಾನವೀಯ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ದಾರುಲ್ ಹುದಾ ರಕ್ತಗತ ಗೊಳಿಸುತ್ತಿದೆ.
ಸಾರೇ ಜಹಾನ್ ಸೆ ಅಚ್ಛಾ , ಹಿಂದೂಸಿತಾನ್ ಹಮಾರಾ, ಹಮಾರಾ.. ಹಮ್ ಬುಲ್ ಬಲೈ ಹೈಂ ಇಸ್ಕೀ
ಯೆ ಗುಲ್ ಸಿತಾನ್ ಹಮಾರ..ಹಮಾರಾ..
ಎಂಬ ಅಲ್ಲಾಮಾ ಇಕ್ಬಾಲರ ಗೀತೆಯನ್ನು ಭಾರತ ಸರಕಾರ ರಾಷ್ಟ್ರ ಗೀತೆಯ ಸಾಲಿಗೆ ಸೇರಿಸಿ ಗೌರವಿಸಿದೆ. ವಿವಿಧ ಬಣ್ಣಗಳ ಹೂವುಗಳಿಂದ ಕಂಗೊಳಿಸುತ್ತಿರುವ ಉದ್ಯಾನವಾಗಿರುವ ನಮ್ಮ ಭಾರತವು ಇಡೀ ಜಗತ್ತಲ್ಲೇ ಶ್ರೇಷ್ಠ ಎಂಬ ಈ ಗೀತೆಯ ಆಶಯವನ್ನು ಇಡೀ ಜಗತ್ತು ಮಾನ್ಯ ಮಾಡಿದೆ. ಬೇರೆ ಬೇರೆ ಧರ್ಮದವರನ್ನು ಬೇರೆ ಬೇರೆ ಬಣ್ಣಗಳ ಹೂವುಗಳಿಗೆ ಹೋಲಿಕೆ ಮಾಡಿ ಉದ್ಯಾನವಕ್ಕೆ ಹಲವು ಬಣ್ಣಗಳ ಹೂವುಗಳು ಶೋಭೆ ತರುವ ಹಾಗೆ ಭಾರತವು ವಿವಿಧ ಧರ್ಮಗಳಿಂದ ಕಂಗೊಳಿಸುತ್ತಿರುವ ಸುಂದರ ಉದ್ಯಾನವನ ಎಂಬ ಆಶಯವು ಹೃದಯಸ್ಪರ್ಶಿಯಾಗಿದೆ. ಈ ಆಶಯದಲ್ಲೇ ಮುಂದುವರಿಯುತ್ತಾ ಬಂದ ಭಾರತವು ಇನ್ನು ಮುಂದಕ್ಕೂ ಹಾಗೆಯೇ ಮುಂದುವರಿಯಬೇಕಾಗಿದೆ. ಇಲ್ಲವಾದಲ್ಲಿ ಭಾರತಕ್ಕೆ ಉಳಿಗಾಲವಿಲ್ಲ. ವಿವಿಧತೆಯಲ್ಲಿ ಏಕತೆಯು ಭಾರತದ ಉಸಿರಾಗಿದೆ.
ಭಾರತ ದೇಶದ ಕಲೆ, ಸಾಹಿತ್ಯ, ಸಂಗೀತ, ನಿರ್ಮಾಣ ಕಲೆ, ಸ್ವಾತಂತ್ರ್ಯ ಹೋರಾಟದ ಇತಿಹಾಸ ಮುಂತಾದ ಸರ್ವ ರಂಗಗಳಲ್ಲೂ ಹಿಂದೂ- ಮುಸ್ಲಿಮ್ ಶೈಲಿಗಳು ಪರಸ್ಪರ ಬೆಸೆದುಕೊಂಡಿವೆ. ಅವು ಯಾವತ್ತೂ ಯಾರಿಗೂ ಬೇರ್ಪಡಿಸಲಾಗದ ವಿಧದಲ್ಲಿ ಗಾಢವಾಗಿವೆ. ದೇಶದ ಮನುಷ್ಯರಲ್ಲೂ ಈ ಅವಿನಾಭಾವ ಬೆಸುಗೆ ಗಾಢವಾಗಿರಬೇಕಾಗಿದೆ. ಅದನ್ನು ಬೇರ್ಪಡಿಸಲು ನಡೆಸುವ ಪ್ರಯತ್ನ ಉಭಯರಿಗೂ ವಿನಾಶಕಾರಿಯಾಗಿದೆ. ಆದ್ದರಿಂದ ತಾರತಮ್ಯ ರಹಿತ ಮನೋಭಾವ ದೇಶದ ತುರ್ತು ಅವಶ್ಯಕತೆಯಾಗಿದೆ. ಅದನ್ನು ಬೇರ್ಪಡಿಸಲೆತ್ನಿಸುವುದನ್ನು ಎಲ್ಲರೂ ಸೇರಿ ತಡೆಯಬೇಕಾಗುತ್ತದೆ. ವಿದ್ಯಾರ್ಥಿದೆಸೆಯಲ್ಲೇ ಹಾಗೆ ತಡೆಯುವ ಮನೋಭಾವವನ್ನು ವಿದ್ಯಾಲಯಗಳು ಬೆಳೆಸುವುದು ದೇಶದ ಭವಿಷ್ಯದ ಹಿತಚಿಂತನೆಯ ನಿಟ್ಟಿನಲ್ಲಿ ಅನಿವಾರ್ಯವಾಗಿದೆ.