ಇಸ್ಲಾಂ ಎಂದರೇನು?
ಅರಬೀ ಭಾಷೆಯ’ಇಸ್ಲಾಂ’ಎಂಬ ಪದಕ್ಕೆ ನಿಘಂಟುಗಳಲ್ಲಿ ಅನುಸರಣೆ, ವಿಧೇಯತೆ, ಸಮರ್ಪಣೆ ಎಂಬರ್ಥಗಳಿವೆ. ಅಲ್ಲಾಹನ ಅನುಸರಣೆ ಮಾಡುವುದು, ಆತನಿಗೆ ವಿಧೇಯತೆ ತೋರುವುದು ಮತ್ತು ಸರ್ವಸ್ವವನ್ನೂ ಆತನಿಗಾಗಿ ಸಮರ್ಪಿಸುವುದನ್ನು ಇಲ್ಲಿ ಇಸ್ಲಾಂ ಎಂದು ಕರೆಯಲಾಯಿತು. ಹೌದು,ಅಲ್ಲಾಹನ ಸಾನಿಧ್ಯದಲ್ಲಿ ಸಂಪೂರ್ಣ ಸಮರ್ಪಣೆಯ ಹೆಸರೇ ಇಸ್ಲಾಂ ಆಗಿದೆ. ಆತ್ಮ ಮತ್ತು ಶರೀರದ ಸಂಪೂರ್ಣ ಸಮರ್ಪಣೆ. ಮನುಷ್ಯ ತನ್ನ ಜೀವನದ ಪ್ರತಿಯೊಂದು ರಂಗದಲ್ಲಿಯೂ ಅಲ್ಲಾಹನ ಆದೇಶ, ನಿರ್ದೇಶಗಳನ್ನು ಪಾಲಿಸಬೇಕೆಂದು ಇಸ್ಲಾಂ ಆಶಿಸುತ್ತದೆ. ಶಿರವನ್ನು ಬಾಗಿಸಿದವನು ಮನವನ್ನೂ ಬಾಗಿಸಬೇಕೆಂದು ಅದು ಹೇಳುತ್ತದೆ. ಅಲ್ಲಾಹನ ಆದೇಶಗಳಿಗೆ ವಿರುದ್ಧವಾಗಿರುವ ಎಲ್ಲ ವಿಧ ಆಚಾರ-ವಿಚಾರ,ಸಂಪ್ರದಾಯ ಮತ್ತು ದೇಹೇಚ್ಛೆಗಳನ್ನೂ ಮೆಟ್ಟಿ ನಿಲ್ಲಬೇಕೆಂದು ಇಸ್ಲಾಂ ಆದೇಶಿಸುತ್ತದೆ. ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ ಅವನ ಕಾನೂನುಗಳಿಗೆ ಬದ್ಧನಾಗಿ ಜೀವಿಸಬೇಕು. ವಿಧೇಯತೆಗೆ ಅರ್ಹ ಅಲ್ಲಾಹನು ಮಾತ್ರನಾಗಿದ್ದಾನೆ. ಇಸ್ಲಾಂ ಸ್ವೀಕರಿಸುವುದೆಂದರೆ ತನ್ನನ್ನು ದೇಹೇಚ್ಛೆಗಳಿಂದಲೂ,ಅಲ್ಲಾಹೇತರ ದೈವಿಕ ಶಕ್ತಿಗಳ ನಂಬಿಕೆಯಿಂದಲೂ ಮುಕ್ತಗೊಳಿಸಿ ಅಲ್ಲಾಹನ ಮಾತ್ರ ಅಧೀನತೆಯನ್ನು ಸ್ವೀಕರಿಸುವುದಾಗಿದೆ. ಇಸ್ಲಾಮನ್ನು ಪ್ರವೇಶಿಸುವಾಗ ಹೇಳುವ ‘ಲಾ ಇಲಾಹ ಇಲ್ಲಲ್ಲಾಹು’ಎಂಬ ಪವಿತ್ರ ವಚನದ ತಾತ್ಪರ್ಯವೂ ಇದೇ ಆಗಿರುತ್ತದೆ. ಇಸ್ಲಾಂ ಎಂಬ ಪದಕ್ಕಿರುವ ಇನ್ನೊಂದರ್ಥ ಶಾಂತಿ ಮತ್ತು ಸಮಾಧಾನ ಎಂದಾಗಿದೆ. ಅಲ್ಲಾಹನ ನಿಯಮ ಗಳ ಪಾಲನೆ ಮತ್ತು ಆತನ ಕಲ್ಪನೆಗಳ ಅನುಸರಣೆ ಸಂಘರ್ಷ ರಹಿತ ಜೀವನ ನಡೆಸಲು ಅನುಕೂಲಕರ ವಾತಾವರಣವನ್ನು ಸ್ರಷ್ಟಿ ಸುತ್ತದೆ. ಕುಟುಂಬ, ಸಮಾಜ ಮತ್ತು ರಾಷ್ಟ್ರದಲ್ಲೂ ಸಮಾಧಾನ ನೆಲೆಸುತ್ತದೆ. ಹ್ರದಯವು ನೆಮ್ಮದಿಯ ತಾಣವಾಗಿ ಬಿಡುತ್ತದೆ. ಸ್ವಲ್ಪತನ್ನ ಸುತ್ತಮುತ್ತಲಿನ ಜಗತ್ತನ್ನೊಮ್ಮೆ ಗಮನಿಸಿ ನೋಡಿ ಸೂರ್ಯ, ಚಂದ್ರ, ಭೂಮಿ, ನಕ್ಷತ್ರ ಮತ್ತು ವಿಶ್ವದಲ್ಲಿರುವ ಅಸಂಖ್ಯ ಅಂಗಗಳೆಲ್ಲವೂ ಸೌಹಾರ್ದ ಯುತ ವಾಗಿ,ಶಾಂತ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿದೆಯಾದರೆ ಅವೆಲ್ಲವೂ ಮುಸ್ಲಿಂ ಆಗಿದೆಯೆಂದರ್ಥ ಇದು ಅವೆಲ್ಲವೂ ಒಬ್ಬನೇ ದೇವನ ನಿಯಂತ್ರಣದಲ್ಲಿರುವುದನ್ನು ಸಾಬೀತು ಪಡಿಸುತ್ತದೆ . ಆತನಿಗೆ ವಿಧೇಯತೆ ತೋರಿ ಅವನನ್ನು ಅನುಸರಿಸುವುದರಿಂದಲೇ ಇಲ್ಲಿ ಶಾಂತಿ ನೆಲೆಸಿರುವುದು.ಇದೇ ವಾಸ್ತವಿಕತೆ ಯನ್ನು ಪವಿತ್ರ ಕುರ್‌ಆನ್ ಅತ್ಯಂತ ಮನೋಜ್ಞವಾಗಿ ಈ ರೀತಿ ವಿವರಿಸುತ್ತದೆ. “ಭೂಮಿ ಆಕಾಶಗಳಲ್ಲಿ ಏಕೈಕ ಅಲ್ಲಾಹನ ಹೊರತು ಇತರ ದೇವರುಗಳೂ ಇರುತ್ತಿದ್ದರೆ ಇವೆರಡರ ವ್ಯವಸ್ಥೆಯೂ ಕೆಟ್ಟು ಹೋಗುತ್ತಿತ್ತು. ಆದುದರಿಂದ ವಿಶ್ವ ಸಿಂಹಾಸನದ ಪ್ರಭುವಾಗಿರುವ ಅಲ್ಲಾಹ್ ಇವರು ಹೊರಿಸುವ ಆರೋಪಗಳಿಂದ ಪರಿಶುದ್ಧನಾಗಿರುತ್ತಾನೆ. ಪವಿತ್ರಕುರ್‌ಆನ್: ಅಧ್ಯಾಯ೨೧, ಸೂಕ್ತ ೨೨) ಭೂಮಿಯ ಮೇಲೆ ಈಗ ತಾಂಡವಾಡುತ್ತಿರುವ ಅರಾಜಕತೆ, ಅಶಾಂತಿ ಮತ್ತು ಅಸಮಾಧಾನಕ್ಕೆ ಅಲ್ಲಾಹೇತರ ನಿಯಮ, ನಿರ್ದೇಶ ಮತ್ತು ಮನುಷ್ಯ ನಿರ್ಮಿತ ಕಾನೂನುಗಳೇ ಮೂಲ ಕಾರಣ ವಾಗಿದೆ. ನಿಯಮ ನಿರ್ಮಿಸುವ ಅಧಿಕಾರ ಕೇವಲ ಅಲ್ಲಾಹನಿಗೆ ಮಾತ್ರ ಸೀಮಿತವಾಗಿರುತ್ತದೆ. ‘ಯಾರೂ ಯಾರಿಗೂ ನಿಯಮ ನಿರ್ಮಿಸದಿರಿ, ಎಲ್ಲರೂ ಸ್ರಷ್ಟಿಕರ್ತನೂ,ಜಗದೊಡೆಯನೂ ಆದ ಅಲ್ಲಾಹನ ನಿಯಮಗಳನ್ನು ಮಾತ್ರ ಪಾಲಿಸಿರಿ’ ಎಂದು ಇಸ್ಲಾಂ ಸಾರಿ ಹೇಳುತ್ತದೆ. ಅಲ್ಲಾಹನು ನೀಡಿದ ಜೀವನ ವ್ಯವಸ್ಥೆಯನ್ನು ಮನಃ ಪೂರ್ವಕ,ಪೂರ್ಣ ಸ್ವತಂತ್ರನಾಗಿ ಸ್ವೀಕರಿಸಿ ಅದನ್ನನುಸರಿಸುವ ಪ್ರತಿಜ್ಞೆ ಮಾಡಿದವನೇ ಮುಸ್ಲಿಂ ಆಗಿರುತ್ತಾನೆ.