ಬೇಲಿ ಮತ್ತು ಮೆಟ್ಟಿಲು.

muhammad1ಹದಿನಾರನೆಯ ಶತಮಾನದಲ್ಲಿ ಜೀವಿಸಿದ ಡಾ|| ಅಂಬ್ರಾಯಿಸ್ ಪೆರೆಯ ಒಂದು ಕಥೆ ಆಶ್ಚರ್ಯವೇ ಸರಿ. ಫ್ರೆಂಚ್ ಮಿಲಿಟರಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪೆರೆ ಸೈನಿಕರ ಗಾಯದ ಬಗ್ಗೆ ಚಿಂತಾಕ್ರಾಂತನಾಗಿದ್ದ. ಗಾಯದಿಂದ ರಕ್ತ ಸ್ರಾವವನ್ನು ತಡೆಗಟ್ಟಲು ಸಾಧ್ಯವಾಗದೇ ಅನೇಕ ಸೈನಿಕರು ಸಾವನ್ನಪ್ಪುತ್ತಿದ್ದರು. ಹೇಗಾದರು ಈ ಸಂಕಟದಿಂದ ಅವರನ್ನು ಪಾರು ಮಾಡಲೇ ಬೇಕೆನ್ನುವ ಹಠದಲ್ಲಿ ಹಲವು ರೀತಿಯ ಸಂಶೋಧನೆಗೆ ಪೆರೆ ಸಜ್ಜಾಗುತ್ತಾನೆ. ಕೊನೆಗೆ ಗಾಯವನ್ನು ಹೊಲಿಯುವ ಸೂಚರ್ ವ್ಯವಸ್ಥೆಯನ್ನು ಕಂಡುಹಿಡಿಯುತ್ತಾನೆ. ಅವಿರತ ಪರಿಶ್ರಮದಿಂದ ಪರಿಹಾರ ಕಂಡು ಕೊಂಡರೂ ಗಾಯವನ್ನು ಹೊಲಿಯ ಬಹುದೆನ್ನುವುದನ್ನು ಯಾರೂ ನಂಬುತ್ತಿಲ್ಲ. ಗಾಯಳುಗಳು ಗಾಯವನ್ನು ಹೊಲಿಸಿಕೊಳ್ಳಲು ಮುಂದೆ ಬರುವುದೂ ಇಲ್ಲ. ಕೊನೆಗೆ ತಾನೇ ಒಂದು ಸಾಹಸಕ್ಕೆ ಮುಂದಾಗಬೇಕಾಯಿತು. ಪೆರೆ ಹರಿತವಾದ ಬ್ಲೇಡಿನಿಂದ ತನ್ನ ತೊಡೆಯನ್ನೇ ಕೊಯ್ದುಕೊಳ್ಳುತ್ತಾನೆ. ಜನರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಂತೆ ಸೂಚರ್ ಸಹಾಯದಿಂದ ಗಾಯವನ್ನು ಹೊಲಿದು ಕೊಳ್ಳುತ್ತಾನೆ. ಈ ಮೂಲಕ ಚರ್ಮ ಮತ್ತು ಮಾಂಸ ಕೂಡುವುದರೊಂದಿಗೆ ಹೊಲಿಗೆ ಚರ್ಮದೊಳಗೆ ಕರಗುವ ಸೂಚರ ವ್ಯವಸ್ಥೆ ಜಗತ್ತಿನ ಮುಂದೆ ಬೆಳಕು ಕಂಡಿತು. ಇನ್ನು ಶಸ್ತ್ರಕ್ರಿಯೆ ಹಿಂದಿನ ಕಾಲದಲ್ಲಿ ಮಾರಣಾಂತಿಕವಾಗಿತ್ತು. ಶಸ್ತ್ರಕ್ರಿಯೆಗೆ ಒಳಪಡುವ ವ್ಯಕ್ತಿಯನ್ನು ಗೂಟಗಳಲ್ಲಿ ಹಗ್ಗದಿಂದ ಕಟ್ಟಿ ಹಾಕಲಾಗುತ್ತಿತ್ತು. ಅಂತಹಾ ಸಂದರ್ಭಗಳಲ್ಲಿ ಅನೇಕರು ಸಕತ್ತಾಗಿ ಏಟು ತಿಂದರೆ ಮತ್ತೆ ಕೆಲವರು ಪ್ರಾಣವನ್ನು ತೆತ್ತದ್ದುಂಟು. ರೋಗಿಯ ಶುಶ್ರೂಷಕರಿಗೆ ಹೆಚ್ಚು ನರಕಯಾತನೆ ಅನುಭವಿಸಬೇಕಾಗಿ ಬರುತ್ತಿತ್ತು. ನೋವಿನ ಅರಿವು ಬರದಂತೆ ಇರುವ ಪ್ರಯೋಗ ಅನಿವಾರ‍್ಯವಾಗಿತ್ತು. ಈ ನಿಟ್ಟಿನಲ್ಲಿ ಪ್ರಯೋಗಕ್ಕೆ ಮುಂದಾದ ವಿಲಿಯಂ ಮಾರ್ಟನ್ ಅನಸ್ತೇಶಿಯಾವನ್ನು ಕಂಡುಹಿಡಿಯುತ್ತಾನೆ. ನೋವಿಲ್ಲದೇ ದೇಹದ ಅಂಗಾಂಗವನ್ನು ಕತ್ತರಿಸಬಹುದು ಎನ್ನುವುದನ್ನು ಯಾರೂ ನಂಬುತ್ತಿಲ್ಲ ಕೊನೆಗೆ ತನ್ನ ಮಗನ ಬೆರಳನ್ನೇ ಕತ್ತರಿಸಲು ಮುಂದಾಗುತ್ತಾನೆ. ನೂರಾರು ವೈದ್ಯರ ಸಮ್ಮುಖದಲ್ಲಿ ಅನಸ್ತೇಶಿಯ ಪ್ರಯೋಗಾರ್ಥವಾಗಿ ಮಗನ ಬೆರಳನ್ನು ಕತ್ತರಿಸುತ್ತಿದ್ದರೆ ಆತ ಮಾತ್ರ ನಗುಮುಖದಲ್ಲಿ ಮಂದಹಾಸ ಬೀರುತ್ತಿದ್ದ. ಪರೀಕ್ಷೆ ಯಶಸ್ವಿಯಾಗಿತ್ತು ನಿಜ. ಆದರೆ ಯಾರಿಗೂ ತಿಳಿಯದೇ ಅಲ್ಲೊಂದು ಪ್ರಮಾದ ನಡೆದು ಹೊಗಿತ್ತು. ಪರೀಕ್ಷೆಯ ಸಮಯ ಬೆರೆಸಬೇಕಾದ ದ್ರಾವಣ ಮರೆತು ಹೋಗಿತ್ತು. ಅಂದು ಅನಸ್ತೇಶಿಯ ಫಲಕಾರಿಯಾಗಿಲ್ಲವಾಗಿದ್ದರೂ ನೋವನ್ನು ಸಹಿಸಿ ಆತ ನಗುತ್ತಿದ್ದ. ಒಂದು ವೇಳೆ ನೋವನ್ನು ಆತ ತೋರ್ಪಡಿಸಿದ್ದೇ ಆದರೆ ಅನಸ್ತೇಶಿಯ ಪ್ರಯೋಗ ಬಿದ್ದು ಹೋಗುತ್ತಿತ್ತು. ಇಂದು ಜಗತ್ತು ಅನಸ್ತೇಶಿಯಾ ಮೂಲಕ ನೋವನ್ನು ಅನುಭವಿಸುತ್ತಿಲ್ಲವಾದರೂ ಅಂದು ವಿಲಿಯಂ ಮಾರ್ಟಿನ್‌ನ ಮಗ ಮಾತ್ರ ತುಂಬಾ ನೋವನ್ನು ಅನುಭವಿಸಿದ್ದು ನಿಜ, ಆದರೆ ಇದು ಹೆಚ್ಚಿನವರಿಗೆ ಗೊತ್ತೇ ಇರುವುದಿಲ್ಲ. ಎಲ್ಲಾ ಸಾಧನೆಯ ಹಿಂದೆ ನೋವು ಸಂಕಟ ಇದ್ದೇ ಇದೆ. ಜಗತ್ತಿನ ಸಾಹಸಿಗರು, ಸಾಧಕರು, ಉಪಕಾರಿಗಳು ಒಂದಲ್ಲ ಒಂದು ರೀತಿ ಸಂಕಟ ಅನುಭವಿಸಿದವರೇ ಆಗಿರುತ್ತಾರೆ. ನೋವು, ಕಣ್ಣೀರು, ದುಃಖಗಳಿಲ್ಲದೇ ಉತ್ತಮ ಸಾಧನೆಗಳು ನಡೆಯುವುದೇ ಇಲ್ಲ. ಆದರೆ ಅವೆಲ್ಲವೂ ಅನುಭವಿಸಿದವರ ಅಂತರಂಗದಲ್ಲೇ ಉಳಿದು ಬಿಡುತ್ತದೆ. ಕೆಲವೊಂದು ಸಂಕಟಗಳನ್ನು ಯಾರೊಂದಿಗೂ ಹೇಳುವಂತಿಲ್ಲ ಹೇಳಿ ಪ್ರಯೋಜನವೂ ಇಲ್ಲ. ಒಂದು ಹೊತ್ತಿನ ತುತ್ತಿಗೆ ತತ್ವಾರವಿದ್ದಾಗ ಮಕ್ಕಳ ಹಸಿವನ್ನು ತಣಿಸಲು ತಂದೆಯಾದವನು ಕಾಡಿ, ಬೇಡಿ, ಸಾಲಕ್ಕಾಗಿ ಅಂಗಲಾಚಿ ಅಂಗಡಿ ಮುಂದೆ ಕೈ ಕಟ್ಟಿನಿಂತ ಅದೆಷ್ಟೋ ಕ್ಷಣಗಳು ಜೀವನದ ಕಷ್ಟದ ದಿನಗಳು. ಆದರೆ ’ನನ್ನನ್ನು ಏಕೆ ಹುಟ್ಟಿಸಿರುವೆ ಎಂದು ಪ್ರಶ್ನಿಸುವ ಕೆಟ್ಟ ಮಗನೊಂದಿಗೆ ಇದನ್ನು ಹೇಳಿ ಏನು ಪ್ರಯೋಜನ? ಕಟ್ಟಿಕೊಂಡವಳಿಗೆ ಮಕ್ಕಳುಟ್ಟಿಸಿ ಕೊನೆಗೂ ಕೈ ಕೊಟ್ಟು ಹೋದ ಪತಿಯ ಅಭಾವವನ್ನು ಲೆಕ್ಕಿಸದೇ ಮನೆ, ಮನೆ ಅಲೆದಾಡಿ ಅಂಗಲ ಗುಡಿಸಿ, ಪಾತ್ರೆ ತೊಳೆದು, ಮಗುವನ್ನು ಸಾಕಿದ ತಾಯಿ ಅನೇಕ ಕಷ್ಟಗಳನ್ನು ಎದುರಿಸಿದಳು. ಅವಳೊಂದಿಗೆ ಜಗಳವಾಡಿ ಮನೆ ಬಿಟ್ಟು ಹೊರಟುನಿಂತ ಕೊಬ್ಬಿ ಬೆಳೆದ ಮಗನೊಂದಿಗೆ ತಾಯಿ, ತನ್ನ ಸಂಕಟವನ್ನು ಹೇಗೆ ವಿವರಿಸಲು ಸಾಧ್ಯ? ವಿಧವೆಯಾದವಳು ಮಕ್ಕಳಿಗಾಗಿ ತನ್ನ ಯವ್ವನದ ಬಯಕೆಯನ್ನೇ ಬಲಿಕೊಟ್ಟು ಸಹನೆ ಕೈಗೊಳ್ಳುತ್ತಾಳೆ. ಬೇರೆ ಮದುವೆ ಪ್ರಸ್ತಾಪ ಬಂದರೂ ಮಕ್ಕಳ ಗತಿ ಏನೇಂದು ಚಿಂತಿಸುತ್ತಾಳೆ. ಇಂತಹಾ ಮಾತೆಯನ್ನು ತಿರಸ್ಕರಿಸಿ ಹೊರಟುಹೋಗುವ ಮಕ್ಕಳೊಂದಿಗೆ ಅವಳು ಏನನ್ನು ಹೇಳಲು ಸಾದ್ಯ? ಮುದ್ದಾಡಿದ ಮುಖಗಳು ಅವಳನ್ನು ಕಂಡರೆ ಕೆಂಪಾಗುತ್ತವೆ ಮುತ್ತಿಕ್ಕಿದ ಪುಟ್ಟ ಪಾದಗಳು ಅವಳನ್ನು ಒದೆಯಲು ಮುಂದಾಗುತ್ತವೆ. ಆದರೂ ಅವಳು ಸಹಿಸುತ್ತಾಳೆ.! ತನ್ನ ವೃತ್ತಿ, ಸಂಸಾರ, ಎಲ್ಲವನ್ನೂ ಬಿಟ್ಟು ಸಂಘ, ಸಂಸ್ಥೆ, ಸಮಾಜ, ಆದರ್ಶ, ಅಂತ ಬೀಗುತ್ತಿದ್ದವರೂ ಇಂತಹಾ ಅವಗಣನೆಯ ಕರಾಳ ಕ್ಷಣಗಳನ್ನು ನೆನಪಿಸುತ್ತಿರಬಹುದು. ತನ್ನ ಸಂಘ ಮತ್ತು ಆದರ್ಶದವರೇ ವಿರುದ್ಧವಾಗಿ ತಿರುಗಿ ಬಿದ್ದರೂ ಸಹಿಸಿಕೊಳ್ಳುವ ಮನಸ್ಸು ಮಾತ್ರ ತ್ಯಾಗಿಯಾದ ಮನಸ್ಸು. ಸ್ವಾರ್ಥಿಗಳು ಎಲ್ಲಿ ನುಸುಳುತ್ತಾರೋ ಅಲ್ಲಿ ಹುಳ ಹತ್ತಿತು ಅಂತ ಅರ್ಥ. ಫಲ ನೀಡುವ ಮರಗಳಿಗೇ ಹುಳಬಾಧೆ. ಉತ್ತಮ ವ್ಯಕ್ತಿಗಳಿಗೇ ಆಪಾದನೆಯೆಂಬ ಕಲ್ಲು ಎಸೆಯಲ್ಪಡುವುದು. ತೆಂಗಿನ ಗಿಡವಿದ್ದಾಗ ಸುತ್ತಲೂ ಬೇಲಿ ಕಟ್ಟಬೇಕು ಅದು ಮರವಾಗಿ ಬೆಳೆದಾಗ ಕಾಯಿ ಕೀಳುವವನಿಗೆ ಬೇಲಿಗೋಚರಿಸುವುದಿಲ್ಲ. ಮಹಡಿಹತ್ತಿದ ಮೇಲೆ ಮೆಟ್ಟಿಲು ಏಕೆ? ನದಿದಾಟಿದ ಮೇಲೆ ದೋಣಿ ಏಕೆ? ಎಂದೆಲ್ಲಾ ಚಿಂತಿಸುವ ದುರುಳರು ಇರೋತನಕ ನೋವು, ಕಣ್ಣೀರು, ಸಂಕಟ ಒಳಗೊಳಗೆ ಮರೆಯಾಗುತ್ತಲೇ ಇರುತ್ತದೆ. ಜಗತ್ತಿನಲ್ಲಿ ನೋವಿನಿಂದ ಮತ್ತು ಕಣ್ಣೀರಿನಿಂದ ಕಟ್ಟಿದ ವಿಸ್ಮಯ ಸೌಧಕ್ಕೆ ಅಮರತ್ವವಿದೆ ಅದುವೇ ತ್ಯಾಗ. ತ್ಯಾಗಿಗಳು ಯಾವತ್ತೂ ಬದುಕನ್ನು ಒಂದು ರೀತಿಯಲ್ಲಿ ಬೇಲಿ, ದೋಣಿ, ಮೆಟ್ಟಲುಗಳಾಗಿ ಪರಿವರ್ತಿಸಿದ್ದರು ಎನ್ನುವುದಕ್ಕೆ ಮಾನವ ಇತಿಹಾಸವೇ ಸಾಕ್ಷಿ ಮುಂದಿನ ಜನಾಂಗ ಯಶಸ್ವಿನತ್ತ ಸಾಗಬೇಕಾದರೆ ನಾವೇ ಅವರಿಗೆ ಬೇಲಿ ಮತ್ತು ಮೆಟ್ಟಿಲುಗಳಾಗಬೇಕು. ನಿಮ್ಮ ಇಷ್ಟಾರ್ಥಗಳನ್ನು ಇತರರಿಗಾಗಿ ತ್ಯಜಿಸುವ ತನಕ ಪುಣ್ಯ ಲಭಿಸದು(ಕುರ್‌ಆನ್) -ಮೌಲಾನಾ.ಯು.ಕೆ ಕಲ್ಲೇಗ    

Related Posts

Leave A Comment

Voting Poll

Get Newsletter