ಬಹುಪತ್ನಿತ್ವ ಮತ್ತು ಜನರ ಗ್ರಹಿಕೆ
ಬಹುಪತ್ನಿತ್ವ ಎಂದ ಕೂಡಲೇ ಜನರ ಗ್ರಹಿಕೆ ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆಯಾಗುವವರು ಎಂದು. ಈ ತಪ್ಪು ತಿಳಿವಳಿಕೆಗೆ ಜನರ ತಿಳಿಗೇಡಿತನಕ್ಕಿಂತ ಮಾಧ್ಯಮಗಳ ಮತ್ತು ಹಗೆ ವರ್ತಕ ರಾಜಕಾರಣಿಗಳ ಕುಚೋದ್ಯದ ಅಪಪ್ರಚಾರ ಕಾರಣ ಎನ್ನಬಹುದು. ಹೌದು ಇಸ್ಲಾಂ ಬಹುಪತ್ನಿತ್ವವನ್ನು ಅನುಮತಿಸುತ್ತದೆ ಷರತ್ತುಗಳೊಂದಿಗೆ. ಈ ಶರತ್ತುಗಳೇ ನನ್ನಂಥ ಮತ್ತು ಶೇಕಡಾ 90 ಕ್ಕಿಂತ ಹೆಚ್ಚು ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಹೆಂಡಿರನ್ನು ಹೊಂದಲು ಇಷ್ಟ ಪಡದೆ ಇರುವುದಕ್ಕೆ ಕಾರಣ. ದೇವವಾಣಿ “ಪವಿತ್ರ ಕುರ್’ ಆನ್” ನಲ್ಲಿ ವಿಶ್ವಾಸ ಇಡುವ ಮುಸ್ಲಿಮನೊಬ್ಬ ದೇವರು ವಿಧಿಸಿದ ಶರತ್ತುಗಳನ್ನು ಅವಗಣಿಸಿ ತನ್ನ ಶಾರೀರಿಕ ತೃಷೆಗಾಗಿ ಪಾಪವನ್ನು ತನ್ನ ಮೇಲೆ ಹೇರಿಕೊಳ್ಳಲಾರ. ಹಾಗೆಯೇ ಬಹುಪತ್ನಿತ್ವ ಇಸ್ಲಾಮಿಗೆ ಮಾತ್ರ ಸೀಮಿತ ಅಲ್ಲ ಎಂದು ಈ ಕುರಿತು ನಡೆದ ಅಧ್ಯಯನಗಳು ಸ್ಥಿರೀಕರಿಸುತ್ತವೆ. ಹಿಂದೂ ಧರ್ಮೀಯರ ಬೌಧಾಯನ ಧರ್ಮಶಾಸ್ತ್ರದಲ್ಲಿ ಬ್ರಾಹ್ಮಣರು ನಾಲ್ಕು ಹೆಂಡಿರನ್ನೂ, ಕ್ಷತ್ರಿಯ ಮೂರು, ವೈಶ್ಯ ಎರಡು ಮತ್ತು ಶೂದ್ರ ಒಂದು ಹೆಣ್ಣನ್ನು ಮದುವೆಯಾಗಬಹುದು. ಭಗವಾನ್ ಶ್ರೀ ಕೃಷ್ಣನೂ, ಮತ್ತು ಪಾಂಡವರೂ ಬಹುಪತ್ನಿತ್ವವನ್ನು ಆಚರಿಸಿದವರು. ಕನ್ನಡದ ಸುಪ್ರಸಿದ್ಧ ವೆಬ್ತಾಣವೊಂದರಲ್ಲಿ ಒಬ್ಬರು “ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!” ಶೀರ್ಷಿಕೆಯಡಿ ಮೈಸೂರಿನ ರಾಜ ಮನೆತನ ಬಹುಪತ್ನಿತ್ವವನ್ನು ಆಚರಿಸುತ್ತಿತ್ತು ಎಂದು ಬರೆದಿದ್ದರು. . ಅದರ ತುಣುಕೊಂದನ್ನು ಕೆಳಗೆ ನೀಡಿದ್ದೇನೆ. ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ 22 ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ ಹೆಂಡತಿಯರ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯನ್ನೂ ದಾಖಲಿಸಲಾಗಿದೆ. ಇಡೀ ಚೂರ್ಣಿಕೆಯ ಬರಹ “ಎಫಿಗ್ರಾಫಿಯಾ ಕರ್ನಾಟಿಕ” ಸಂಪುಟ 5ರಲ್ಲಿ ಪ್ರಕಟವಾಗಿದೆ. ಅದರ ಇಂಗ್ಲೀಷ್ ಅನುವಾದವೂ ಅಲ್ಲೇ ಪ್ರಕಟವಾಗಿದೆ. ಈ ಚೂರ್ಣಿಕೆಯನ್ನು ಸಿದ್ಧ ಪಡಿಸಿದ ಕಲಾವಿದ ತಿಪ್ಪಣ್ಣ ಎನ್ನುವ ವ್ಯಕ್ತಿ. ಮೈಸೂರು ರಾಜರುಗಳು ಮತ್ತು ಅವರ ಸಂಸಾರ: ದೊಡ್ಡ ದೇವರಾಜ ಒಡೆಯರ್ - 53 ಹೆಂಡಿರು 11 ಮಕ್ಕಳು ಚಿಕ್ಕ ದೇವರಾಜ ಒಡೆಯರ್ - 22 ಹೆಂಡಿರು, 2 ಮಕ್ಕಳು ಕಂಠೀರವ ಮಹಾರಾಜ ಒಡೆಯರ್ - 3 ಹೆಂಡಿರು, 5 ಮಕ್ಕಳು ವಮ್ಮಡಿ ದೊಡ್ಡ ಕೃಷ್ಣ ರಾಜ ಒಡೆಯರ್ - 45 ಹೆಂಡಿರು, 3 ಮಕ್ಕಳು ವಮ್ಮಡಿ ಚಾಮರಾಜ ಒಡೆಯರ್ - 3 ಹೆಂಡಿರು, ಮಕ್ಕಳಿಲ್ಲ ಇಮ್ಮಡಿ ಕೃಷ್ಣರಾಜ ಒಡೆಯರ್ -8 ಹೆಂಡಿರು, 9 ಮಕ್ಕಳು ಮುಮ್ಮಡಿ ಖಾಸಾ ಚಾಮರಾಜ ಒಡೆಯರ್ - 10 ಹೆಂಡಿರು ಮತ್ತು 4 ಮಕ್ಕಳು ಮುಮ್ಮಡಿ ಶ್ರೀ ಕೃಷ್ಣ ರಾಜ ಒಡೆಯರ್ ಬಹಾದುರ್- 20 ಹೆಂಡಿರು ಚಾಮರಾಜ ಒಡೆಯರ್ - 65 ಹೆಂಡಿರು ಬೆಟ್ಟ ಚಾಮರಾಜ ಒಡೆಯರ್-12 ಹೆಂಡಿರು, 6 ಮಕ್ಕಳು ರಾಜ ಒಡೆಯರ್ - 8 ಹೆಂಡಿರು, 6 ಮಕ್ಕಳು ಇಮ್ಮಡಿ ರಾಜ ಒಡೆಯರ್- 19 ಹೆಂಡಿರು. ಮೇಲೆ ಹೇಳಿದ ಅರಸರು ವಿವಿಧ ಕಾರಣಗಳಿಗಾಗಿ ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಇಟ್ಟು ಕೊಂಡಿರಬಹುದು ಮತ್ತು ಅವರುಗಳು ಬದುಕಿದ ಕಾಲದಲ್ಲಿ ಹಾಗೆ ಬಹುಪತ್ನೀ ವೃತಸ್ಥರಾಗುವುದು ರೂಢಿಯೂ ಇದ್ದಿರಬೇಕು. ಅರಸರು ಈ ರೀತಿ ಮಾಡಿದಾಗ ಸಮಾಜದ ಪ್ರತಿಷ್ಟಿತ ಗಣ್ಯರೂ ಸಹ 20, 30 ಅಲ್ಲದಿದ್ದರೂ 2, 3 ಪತ್ನಿಯರನ್ನಾದರೂ ಹೊಂದಿರುವ ಸಾಧ್ಯತೆ ಹೆಚ್ಚು ಎಂದೇ ಹೇಳಬಹುದು. ಹಾಗಾಗಿ ಬಹುಪತ್ನಿತ್ವ ಆಗಿನ ಕಾಲದಲ್ಲಿ ಸರ್ವತ್ರ ಎನ್ನಬಹುದು. ಆಫ್ರಿಕಾದ ವಝಿಲ್ಯಾಂಡ್ ದೇಶದ ರಾಜ ಪ್ರತೀ ವರ್ಷವೂ ಸುರ ಸುಂದರ ಕನ್ಯೆಯರ ಮೇಳ ಏರ್ಪಡಿಸಿ ತನಗೆ ಚೆಂದುಳ್ಳಿಯಾಗಿ ಕಂಡ ಚಕೋರಿ ಯನ್ನು ಮದುವೆಯಾಗಿ ತನ್ನ ಚಂದ್ರಮಂಚದ ಸಂಗಾತಿಯರ ಸಾಲಿಗೆ ಸೇರಿ ಕೊಳ್ಳುತ್ತಾನಂತೆ. ಅವನ ಅದೃಷ್ಟಕ್ಕೆ ನಾವು ಹಲುಬಿ ಕರುಬಿ ಫಲವಿಲ್ಲ ಎನ್ನಿ, ಏಕೆಂದರೆ ಇರುವ ಒಬ್ಬ ಹೆಂಡತಿಯ ಆಸೆ, ಅಭಿಲಾಷೆ, ಬೇಕು ಬೇಡಗಳನ್ನು ಪೂರೈಸುವತ್ತ ನಾವು ನಡೆಸುವ ಕುಸ್ತಿ ಕಸರತ್ತೇ ಸಾಕು ಬೇಕಾಗಿರುವಾಗ ಮತ್ತೊಂದು, ಮಗುದೊಂದು, ಇನ್ನೊಂದು ?.ಹೀಗೆ ಹೆಂಡತಿಯರನ್ನು ನಮ್ಮ ಗೋಣಿನ ಸುತ್ತಾ ಪೋಣಿಸುತ್ತಾ ಹೋದರೆ ಒಂದು ದಿನ ಅದೇ ನಮಗೆ ಉರುಳಾಗಿ ನಮ್ಮ ಅವಸಾನಕ್ಕೆ ಕಾರಣವಾಗಬಹುದು ಎನ್ನುವುದರಲ್ಲಿ ಸಂಶಯ ಬೇಡ, ಏನಂತೀರ?