ಸಾಚಾರ್ ಸಮಿತಿ ವರದಿ ಹಾಗೂ ಮುಸ್ಲಿಮರ ಪ್ರಗತಿ: ಅವಲೋಕನ

ಭಾರತದಲ್ಲಿ ಸಾಚಾರ್ ಸಮಿತಿ ವರದಿ ಬಗ್ಗೆ ನೀವು ಕೇಳಿರಬಹುದು. ೨೦೦೫ ಮಾರ್ಚ್ ೯ರಂದು ಪ್ರಧಾನಮಂತ್ರಿ ಕಚೇರಿಯಿಂದ ಒಂದು ಆದೇಶ ಬಂದಿತು. ದೇಶದಲ್ಲಿರುವ ಮುಸ್ಲಿಂ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಆಧರಿಸಿ ಒಂದು ವರದಿ ತಯಾರಿಸಬೇಕೆಂದಾಗಿತ್ತು ಆ ಆದೇಶ. 

ಅಂದಿನ ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನ್ಯಾ. ರಜೀಂದರ್ ಸಾಚಾರ್ ರನ್ನು ಈ ಸಮಿತಿಯ ಮುಖ್ಯರನ್ನಾಗಿ ಮಾಡಿದರು. ಈ ಸಮಿತಿಯಲ್ಲಿ ಸಯ್ಯಿದ್ ಹಮೀದ್, ಟಿ.ಕೆ ಓಮನ್, ಎಂ.ಎ ಬಾಸಿತ್, ರಾಕೇಶ್ ಬಸಂತ್, ಅಕ್ತರ್ ಮಜೀದ್, ಅಬೂಸಾಲಿಹ್ ಶರೀಫ್ ಎಂಬವರಿದ್ದರು.  ೨೦೦೬ ನವೆಂಬರ್ ತಿಂಗಳಲ್ಲಿ ಈ ಸಮಿತಿ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಈ ಸಮಿತಿ ಸಲ್ಲಿಸಿದ ವರದಿಯನ್ನು ಸಾಚಾರ್ ವರದಿ ಎಂದು ಕರೆಯಲಾಗುತ್ತದೆ. 

ಸುದೀರ್ಘ ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ, ೪೦೦ ಕ್ಕೂ ಮಿಕ್ಕ ಪುಟಗಳಿರುವ ವರದಿ ಈ ಸಮಿತಿ ಸಿದ್ಧಪಡಿಸಿತ್ತು. ಮುಸ್ಲಿಮ್ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳ ಸುಧಾರಣೆ ಹಾಗೂ ತುರ್ತಾಗಿ ಕೈಗೊಳ್ಳಬೇಕಾದ ಪರಿಹಾರ ಮಾರ್ಗಗಳನ್ನು ಒಳಗೊಂಡಿತ್ತು ಆ ವರದಿ. ಈ ಸಮುದಾಯವು ಹಿಂದುಳಿದ ವರ್ಗಗಳ ಪೈಕಿ ಪರಿಶಿಷ್ಟ ಪಂಗಡಗಳಿಗಿAತ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದ್ದಾರೆ ಎಂಬುದು ವರದಿಯಿಂದ ತಿಳಿದುಬಂದಿತ್ತು. 

ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಪ್ರಸ್ತಾಪಿಸಿದ ಸಾಚಾರ್ ಸಮಿತಿಯ ವರದಿಯನ್ನು ಸಂಸತ್ತಿಗೆ ಸಲ್ಲಿಸಿ ಈ ವರ್ಷ ನವೆಂಬರ್ ೩೦ ಕ್ಕೆ ೧೬ನೇ  ವರ್ಷ. ಈ ವರದಿಯು ಮುಸ್ಲಿಮರ ಸ್ಥಿತಿಯ ನೈಜ ಚಿತ್ರಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಎನ್. ಡಿ ಪಾಂಚೋಲಿ  ಹೇಳಿದ್ದಾರೆ. 

ವರದಿಯಲ್ಲಿ ಮುಸ್ಲಿಮರ ಶೈಕ್ಷಣಿಕ ಸ್ಥಿತಿಯನ್ನು ಅವಲೋಕಿಸಿರುವ ಸಾಚಾರ್ ಸಮಿತಿ, ವಿದ್ಯಾಭ್ಯಾಸದ ವಿಚಾರದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮರು ಬಹಳ ಹಿಂದಿದ್ದಾರೆ ಎಂದು ಉಲ್ಲೇಖಿಸಿತ್ತು. ಅಲ್ಲದೆ, ಶೈಕ್ಷಣಿಕ ಸಾಲ, ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಇತರೆ ಅಲ್ಪ ಸಂಖ್ಯಾತರಿಗಿಂತ ಮುಸ್ಲಿಮರು ತೀರಾ ಹಿಂದಿದ್ದಾರೆ. ಅವರ ಅಭ್ಯುದಯಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಮಿತಿ ಹಲವು ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟಿತ್ತು. 

ಸ್ವಾತಂತ್ರ‍್ಯಾನಂತರದ ಭಾರತವು ಅಭಿವೃದ್ಧಿಯಲ್ಲಿ ಅನೇಕ ಪ್ರಗತಿಯನ್ನು ಸಾಧಿಸಿದೆ, ಬಡತನ ಮತ್ತು ಅನಕ್ಷರತೆಯ ಮಟ್ಟವನ್ನು ಕಡಿಮೆ ಮಾಡಿದೆ ಮತ್ತು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದೆ, ಆದರೆ ಈ ಅಭಿವೃದ್ಧಿಯ ಲಾಭವು ದೇಶದ ಎಲ್ಲಾ ಭಾಗಗಳಿಗೆ, ಸಮುದಾಯಗಳಿಗೆ ಸಮಾನವಾಗಿ ಹರಡಿಲ್ಲ. ಮುಸ್ಲಿಂ ಸಮಾಜದ  ಪರಿಸ್ಥಿತಿಯನ್ನು ಕೇವಲ ಅಲ್ಪಸಂಖ್ಯಾತರ ಸಮಸ್ಯೆ ಎಂದು ಪರಿಗಣಿಸದೆ ರಾಷ್ಟ್ರೀಯ ಸಮಸ್ಯೆಯಾಗಿ ನೋಡಬೇಕು ಎಂದು ವರದಿ ಸ್ಪಷ್ಟಪಡಿಸಿದೆ. 

ನ್ಯಾಯಮೂರ್ತಿ ಸಾಚಾರ್ ಮತ್ತು ಅವರ ತಂಡವು ಅತಿ ದೊಡ್ಡ ಅಲ್ಪಸಂಖ್ಯಾತರಾದ ಮುಸ್ಲಿಮರ ಪರಿಸ್ಥಿತಿಗೆ ಸಂಬAಧಿಸಿದAತೆ ಸಮಗ್ರ ಮತ್ತು ಪರಿಣಾಮಕಾರಿ ಪರಿಹಾರ ಕ್ರಮಗಳನ್ನು ಸೂಚಿಸುವ ನಿಷ್ಪಕ್ಷಪಾತಿ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಿತ್ತು. ಆದರೆ, ಸರಕಾರ ಮತ್ತು ಸಂಬಂಧಪಟ್ಟ ನೀತಿ ತಂತ್ರಜ್ಞರು  ವರದಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ  ಹಿಂದೇಟು ಹಾಕಿದ್ದರು. 

ಅಲ್ಪಸಂಖ್ಯಾತರ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಲು  ಹಲವು ಪಕ್ಷಗಳು ಯತ್ನಿಸಿದವು. ವಾಸ್ತವವೆಂದರೆ ಮುಸ್ಲಿಮರು ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಅತ್ಯಂತ ಕೆಳ ಹಂತದಲ್ಲಿದ್ದಾರೆ. ಅದರಂತೆಯೇ,  ೨೦೧೪ ರಲ್ಲಿ ಮುಸಲ್ಮಾನರ ಸಮಸ್ಯೆಗಳನ್ನು ಪರಿಶೀಲಿಸಲು ನೇಮಿಸಿದ ಕುಂದು ಆಯೋಗದ ಶಿಫಾರಸುಗಳು ಅರಣ್ಯರೋದನವಾಗಿ ಪರಿಣಮಿಸಲಿಲ್ಲವೇ? ಇಂತಹ ಆಯೋಗಗಳ ಶಿಫಾರಸುಗಳ ನಂತರವೂ ಮುಸ್ಲಿಂ ಸಮುದಾಯವು ಇನ್ನಷ್ಟು ಕರಾಳ ದಿನಗಳನ್ನು ಎದುರಿಸುತ್ತಿದೆ. ಇಂತಹ ವರದಿಗಳ ಹೊರತಾಗಿ, ಮುಸ್ಲಿಮರು ಸಾಂಸ್ಕೃತಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ತೀವ್ರ ಹಿಂದುಳಿದಿರುವುದಕ್ಕೆ ಕಾರಣಗಳನ್ನು ವಿಶ್ಲೇಷಿಸುವ ಲೇಖಕರು ಮತ್ತು ಪತ್ರಕರ್ತರು ಪ್ರಕಟಿಸಿದ ಲೇಖನಗಳು ಮತ್ತು ವರದಿಗಳು ಹೆಚ್ಚು ಮಹತ್ವದ್ದಾಗಿವೆ. 

ವಿಭಜನೆಯ ಸಂದರ್ಭದಲ್ಲಿ ನಡೆದ ಕೋಮುಗಲಭೆಗಳು ಬಹುಪಾಲು ಮುಸ್ಲಿಂ ಸಂತ್ರಸ್ತರನ್ನು ಹೇಗೆ ಹುಟ್ಟುಹಾಕಿದವು ಎಂಬ ಪ್ರಶ್ನೆಗೆ ದಿವಂಗತ ಅಸ್ಗರ್ ಅಲಿ ಇಂಜಿನಿಯರ್ ಅವರು ಬಹಿರಂಗಪಡಿಸಿದ ಸಂಗತಿಗಳು ವಿಶೇಷ ಅಧ್ಯಯನಕ್ಕೆ ಯೋಗ್ಯವಾಗಿವೆ. ಮುಜಾಫರ್ ನಗರ ಗಲಭೆಯಲ್ಲಿ ಕಾನೂನು ಪರಿಪಾಲಕರ ಪಕ್ಷಪಾತವನ್ನು ಬಯಲಿಗೆಳೆದ ವಿ.ಎನ್. ರೈ ಅವರ ಸಂಶೋಧನೆಗಳ ಪರಿಣಾಮಗಳು ಸಹ ನಿರ್ಣಾಯಕವಾಗಿವೆ. ಇಂತಹ ವರದಿಗಳು, ಅಧಿಕಾರದಲ್ಲಿರುವವರು ಗಲಭೆಗಳನ್ನು ಸೃಷ್ಟಿಸಲು ರಾಜತಂತ್ರವನ್ನು ಅವಲಂಬಿಸಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿವೆ.

ಆದರೆ ರಾಷ್ಟ್ರೀಯ ಮತ್ತು ರಾಜ್ಯ ಅಲ್ಪಸಂಖ್ಯಾತ ಆಯೋಗಗಳು ಇಂತಹ ದುರಂತಮಯ ಪರಿಸ್ಥಿತಿಯಲ್ಲಿ ಏಕೆ ಮಧ್ಯಪ್ರವೇಶಿಸುವುದಿಲ್ಲ? ಅಲ್ಪಸಂಖ್ಯಾತರ ಸಚಿವಾಲಯಗಳಲ್ಲಿನ ರಾಜಕೀಯ ಪ್ರೇರಿತ ನೇಮಕಾತಿಗಳನ್ನು ಅವರು ಏಕೆ ಪ್ರಶ್ನಿಸುತ್ತಿಲ್ಲ? ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ನಡೆಯುವ ಪ್ರಹಸನಗಳನ್ನು ಮೌನ ಮತ್ತು ವಿಧೇಯತ್ವದಿಂದ ಮಾನ್ಯ ಮಾಡುವ ಪ್ರವೃತ್ತಿ ಯಾವತ್ತೂ ಯಾರಿಗೂ ಭೂಷಣವಲ್ಲ. 

ಮುಸ್ಲಿಮರು ಮತ್ತು ಇಸ್ಲಾಂ ಧರ್ಮವನ್ನು ಅವಮಾನಿಸುವವರ ವಿರುದ್ಧದ ಆರೋಪಗಳನ್ನು ಈ  ಕಾಲದಲ್ಲಿ ಸುಧಾರಣೆಯಾಗಿ ನೋಡಲಾಗುತ್ತದೆ. ಕಾಲದ ಪ್ರಗತಿಯೊಂದಿಗೆ ಮುಸ್ಲಿಮರು ಬದಲಾಗಲು ಸಿದ್ಧರಿಲ್ಲ ಎಂಬ ದೂರಿಗೆ ಏಕರೂಪ ನಾಗರಿಕ ಸಂಹಿತೆ ಎಂಬ  ಆರೋಪದಿಂದ ಮತ್ತೊಮ್ಮೆ ಶಕ್ತಿಯಾರ್ಜಿಸಿದೆ. ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವು ವಿವಾಹ ಮತ್ತು ವಿಚ್ಛೇದನ ವಿವಾದಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ನೆಪದಲ್ಲಿ ಭಾರೀ ಪ್ರಚಾರಗಳು ಇನ್ನೊಂದೆಡೆ  ನಡೆಯುತ್ತಿವೆ.

ಅಲ್ಪಸಂಖ್ಯಾತರ ಅಭ್ಯುದಯಕ್ಕಾಗಿ ಸಾಚಾರ್, ಗೋಪಾಲ್ ಸಿಂಗ್ ಮತ್ತು ಕುಂದು ಅವರಂತಹ ಆಯೋಗಗಳು ಮಾಡಿದ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರಗಳು ಏಕೆ ಸಿದ್ಧವಾಗಿಲ್ಲ ಎಂದು ಮುಸ್ಲಿಮರು ಕೇಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಮುಸ್ಲಿಮರು ಅರ್ಥಾತ್ ಎದುರಿಸುತ್ತಿರುವ ಹಿನ್ನಡೆಯಿಂದ ಹೊರಬರಲು ಮುಂದಾಗದ ಸರ್ಕಾರದ ಗುಟ್ಟೇನು ಎಂದು ಪ್ರಶ್ನಿಸುತ್ತಿದ್ದಾರೆ.

ಮುಸ್ಲಿಂ ಮಹಿಳೆಯರು ಎತ್ತಿರುವ ಪ್ರಶ್ನೆ ಇದು: ಮುಸ್ಲಿಂ ಮಹಿಳೆಯರ ಕಷ್ಟಗಳನ್ನು ಪರಿಹರಿಸುವ ಪ್ರಾಮಾಣಿಕ ಗುರಿಯಿದ್ದರೆ ಬಿಜೆಪಿ ಕಾರ್ಯಕರ್ತರು ಕ್ಷುಲ್ಲಕ ವಿಷಯಗಳಿಗೆ ಮುಸ್ಲಿಂ ಪುರುಷರನ್ನು ಏಕೆ ಹತ್ಯೆ ಗೈಯುತ್ತಾರೆ? ಹೀಗಾಗಿ ನಾವು ವಿಧವೆಯರಾಗುತ್ತೇವೆ. ಬದುಕಿನ ಸಂಕಷ್ಟಗಳು ಹೆಚ್ಚಾಗುತ್ತಿವೆ. ಸರಕಾರದ ಇಂತಹ ದ್ವಂದ್ವ ನೀತಿಗಳು ಮತ್ತು ಪೊಲೀಸ್ ಇಲಾಖೆಯ ಕಾವಿವತ್ಕರಣವು  ಮುಸ್ಲಿಮರಲ್ಲಿ ಭಯ ಮತ್ತು ಅಭದ್ರತೆಯನ್ನು ಬಿತ್ತುತ್ತಿದೆ. ಬಿಜೆಪಿ-ಆರ್‌ಎಸ್‌ಎಸ್ ಮೈತ್ರಿಯು ನಕಲಿ ವಿಚಾರಗಳನ್ನು ಎತ್ತಿಕೊಂಡು ಪ್ರಚಾರ ಪಡೆಯುತ್ತಿದೆ. 

ಮುಸ್ಲಿಂ ಸಮುದಾಯದಲ್ಲಿ ಸಾಕ್ಷರತೆ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ವರದಿ ತಿಳಿಸಿದೆ. ದೇಶದಲ್ಲಿ ೧೫ ವರ್ಷ ಹಿಂದೆ ಬಿಡುಗಡೆಯಾಗಿದ್ದ ಸಾಚಾರ್ ಸಮಿತಿ ವರದಿಯೂ ಇದನ್ನೇ ಹೇಳಿತ್ತು. ಉನ್ನತ  ಶಿಕ್ಷಣಕ್ಕೆ ನೋಂದಣಿ ಪ್ರಮಾಣ , ನೋಂದಾಯಿತ ವಿದ್ಯಾರ್ಥಿಗಳಲ್ಲಿ ಹಾಜರಾತಿ ಪ್ರಮಾಣ ಮುಸ್ಲಿಂ ಸಮುದಾಯದಲ್ಲಿ ಬಹಳ ಕಡಿಮೆ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಕ್ರೈಸ್ತ ಸಮುದಾಯದಲ್ಲಿ ಶಿಕ್ಷಣ ಪಡೆಯುವವರ ಪ್ರಮಾಣ ಹೆಚ್ಚುತ್ತಿದೆ ಎಂದೂ ವರದಿ ತಿಳಿಸಿದೆ. ಈ ಸಮುದಾಯಗಳಿಗೆ ಹೋಲಿಸಿದರೆ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣವೂ ಮುಸ್ಲಿಂ ಸಮುದಾಯದಲ್ಲಿ ಬಹಳ ಕಡಿಮೆ ಇದೆ.

ಅಲ್ಲದೇ ಇತರೆ ಸಮುದಾಯಕ್ಕೆ ಹೋಲಿಸಿದರೆ ಮುಸ್ಲಿಂ ಮಹಿಳೆಯರಲ್ಲೂ ಕೂಡ ಸಾಕ್ಷರತೆ ಪ್ರಮಾಣ ಬಹಳ ಕಡಿಮೆ ಇದೆ ಎಂದು ವರದಿ ಹೇಳಿದೆ. ಅಲ್ಲದೇ ಮುಸ್ಲಿಂ ಸಮುದಾಯದಲ್ಲಿ ಯುವ ಪೀಳಿಗೆ ಭಾರೀ ಸಂಖ್ಯೆಯಲ್ಲಿ ಇದೆ. ಆದರೆ ಯಾವುದೇ ಶಿಕ್ಷಣಕ್ಕಾಗಿ  ಅವರು ನೋಂದಾಯಿಸಿಕೊಂಡಿಲ್ಲ ಎಂದು ವರದಿ ತಿಳಿಸಿದೆ.

ದೇಶದಲ್ಲಿ ೨೫% ರಷ್ಟು ೬-೧೪ ವರ್ಷದವರೆಗಿನ ಮುಸ್ಲಿಂ ಮಕ್ಕಳು ಶಾಲೆಯ ಬಾಗಿಲನ್ನೇ ಕಂಡಿಲ್ಲ. ಮುಸ್ಲಿಮರಿಗೆ ಸಾಮಾಜಿಕ ಭದ್ರತೆಯನ್ನು ನೀಡಿಲ್ಲ. ಮುಸ್ಲಿಮರಿಗೆ ಸಿಗಬೇಕಾದ ರಾಜಕೀಯ, ಸಾಮಾಜಿಕ ಭದ್ರತೆ ಆಳುವ ಸರಕಾರಗಳು ಕಲ್ಪಿಸಿಲ್ಲ. ಅಂಕಿ ಅಂಶಗಳನ್ನು ನೋಡಿದರೆ ದೇಶದಲ್ಲಿ ವಿವಿಧ ಉನ್ನತ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಮುಸ್ಲಿಮರ ಶೇಕಡಾವಾರು ಪಾಲುದಾರಿಕೆ ೨%-೩% ಗಳಿಗೆ ಸೀಮಿತವಾಗಿದೆ. ಮಿಸಲಾತಿಯನ್ನು ಗರಿಷ್ಠ ಮಟ್ಟಕ್ಕೆ ಅಂದರೆ ಶೆ.೨೨% ನೀಡಲೆಬೇಕಾಗಿದೆ. ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿರುವ ಮುಸ್ಲಿಮರು ಶಿಕ್ಷಣ, ಮೂಲಸೌಕರ್ಯ, ರಾಜಕೀಯ ಪ್ರಾತಿನಿಧ್ಯ ಎಲ್ಲದರಿಂದಲೂ ವಂಚಿತರಾಗಿದ್ದಾರೆ.

ಕರ್ನಾಟಕದಲ್ಲಿ ವರ್ಷಗಳ ಹಿಂದೆ, ೧೫ ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಅವ್ಯವಹಾರ ಹೊರಬಂದಿತ್ತು. ಈ ೧೫ ಲಕ್ಷ ಕೋಟಿಯನ್ನು ರಾಜ್ಯದ ಮುಸ್ಲಿಮರ ಕಲ್ಯಾಣಕ್ಕಾಗಿ ಉಪಯೋಗಿಸಿದ್ದರೆ, ದೆಹಲಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಿಂಗ್ ಸಾಚಾರ್, ಮುಸ್ಲಿಂ ಸಮುದಾಯದಲ್ಲಿ ಕೆಲವರಿಗೆ ಅಗತ್ಯ ಸೌಲಭ್ಯವು ಸಿಕ್ಕಿಲ್ಲ ದಲಿತರಿಗಿಂತ ಕೆಲ ಮುಸ್ಲಿಮರು ಹಿಂದುಳಿದಿದ್ದಾರೆ ಅವರ ಮೇಲೆ ಕಾಳಜಿ ಇಲ್ಲ. ಕಾಳಜಿ ಇದ್ದಿದ್ದರೆ ಸಾಚಾರ್ ವರದಿ ಜಾರಿಗೊಳಿಸಲಿ ಎಂದು ಹೇಳುವ ಅನಿವಾರ್ಯತೆ ಬರುತ್ತಿರಲಿಲ್ಲ. ಇನ್ನು ಲೆಕ್ಕಕ್ಕಿಲ್ಲದ ಅಲ್ಪಸಂಖ್ಯಾತರ ಇಲಾಖೆ, ಜನಸಾಮಾನ್ಯನಿಗೆ ಇದರ ಉಪಯೋಗವೇನು ಎಂದು ಯಾರಿಗೂ ತಿಳಿದಿಲ್ಲ, ಅಲ್ಪಸಂಖ್ಯಾತರ ಇಲಾಖೆ ಬಡವರಿಗೆ, ವಿದ್ಯಾರ್ಥಿಗಳಿಗೆ ಕೈಗೆಟಕದಾಗಿದೆ. ಇಲ್ಲಿ ಮಧ್ಯವರ್ತಿಗಳು, ಅಧಿಕಾರಿಗಳದ್ದೇ ರಾಜ್ಯಭಾರವಾಗಿದೆ. 

ಅಲ್ಪಸಂಖ್ಯಾತರ ಬದುಕು ಹಸನಾಗುವ ವಿಧಾನಗಳಿಗೆ ನೆರವು ನೀಡುವ  ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಲು ಅಧಿಕಾರಿಗಳು ಮುಂದೆ ಬಾರದಿರುವುದು ಸಮಸ್ಯೆಯ ಪ್ರಮುಖ ಅಂಶವಾಗಿದೆ. ಸಾಚಾರ್ ಸಮಿತಿ ರಚನೆಗೂ ಮುನ್ನ ಇದೇ ರೀತಿಯ ಸಮಿತಿಗಳನ್ನು ನೇಮಿಸಲಾಗಿತ್ತು. ಗೋಪಾಲ್ ಸಿಂಗ್ ಆಯೋಗ ಅದಕ್ಕೊಂದು ಸ್ಪಷ್ಟ ಉದಾಹರಣೆ.

ದೇಶದಲ್ಲೆಡೆ ಸಾಚಾರ್ ವರದಿಯ ಬಗ್ಗೆ ಅಪಪ್ರಚಾರಗಳು ಎಗ್ಗಿಲ್ಲದೆ ನಡೆಯುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಕಾಂಗ್ರೆಸ್ ಅಲ್ಪ ಸಂಖ್ಯಾಕರ ಓಲೈಕೆಗಾಗಿ ಈ ವರದಿಯನ್ನು ನೀಡುವಂತೆ ನಾಟಕ ಮಾಡಿದೆಯೇ ಹೊರತು ಅವರೊಂದಿಗಿನ ಕಾಳಜಿಯಿಂದ ಅಲ್ಲ ಎಂಬ ಆರೋಪಗಳು, ಈ ಸಂಬಂಧಪಟ್ಟಂತೆ ಭಿನ್ನ ಧ್ವನಿಗಳು ಕೇಳಿ ಬರುತ್ತಿವೆ. 

ಆದರೆ, ಸಮಿತಿಯ ವರದಿಯು ಸಲ್ಲಿಕೆಯಾದ ಬಳಿಕದ  ೧೬ ವರ್ಷಗಳಲ್ಲಿ ಮುಸ್ಲಿಂ ಸಮುದಾಯ ಯಾವ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಕಂಡಿದೆ, ಅದಕ್ಕೆ ಪೂರಕವಾಗಿ ಯಾವೆಲ್ಲಾ ಸರ್ಕಾರಗಳು ಯಾವೆಲ್ಲ ರೀತಿಯಲ್ಲಿ ಸ್ಪಂದಿಸಿವೆ ಎಂಬುದನ್ನು ಪರಿಶೀಲನೆಗೊಳಪಡಿಸಿದರೆ, ನಮ್ಮ ಸಮುದಾಯದ ದುಸ್ಥಿತಿ ಮನದಟ್ಟಾಗಲು ಹೇಚ್ಛೆನೂ ಸಮಯ ಬೇಕಾಗದು. 

ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮೇ ೨೮ ರಂದು ಕೇರಳ ಹೈಕೋರ್ಟ್ ನೀಡಿದ ತೀರ್ಪು ದುರದೃಷ್ಟಕರ ಮತ್ತು ಸಮುದಾಯಕ್ಕೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದು ಸ್ಪಷ್ಟ. ಈ ತೀರ್ಪಿನೊಂದಿಗೆ ಸಾಚಾರ್ ಸಮಿತಿ ನೀಡಿದ ಶಿಫಾರಸುಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಮುಸಲ್ಮಾನರ ಅಭ್ಯುದಯವನ್ನು ಗುರಿಯಾಗಿಟ್ಟುಕೊಂಡು ಪಾಳೋಲಿ ಸಮಿತಿ ಮಾಡಿರುವ ಶಿಫಾರಸುಗಳು ಎಲ್ಲವೂ ಅಪ್ರಸ್ತುತವಾಗಿವೆ.  

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹೆಚ್ಚು ದಮನಕಾರಿ ಸ್ಥಿತಿಗೆ ಒಳಗಾಗುತ್ತಿರುವ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಸಾಚಾರ್ ಸಮಿತಿ ವರದಿಯನ್ನು ಜಾರಿಗೊಳಿಸುವುದು ಪ್ರಜಾಸತ್ತಾತ್ಮಕ ಸರ್ಕಾರದ ಜವಾಬ್ದಾರಿಯಾಗಿದೆ. ಇಲ್ಲವಾದರೆ ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರಕ್ಕೆ ಮಾಡಿದ ಅತ್ಯಂತ ದೊಡ್ಡ ಅನ್ಯಾಯ ಮತ್ತು ಐತಿಹಾಸಿಕ ದ್ರೋಹವಾಗುತ್ತದೆ.

Related Posts

Leave A Comment

Voting Poll

Get Newsletter