ಇಸ್ಲಾಮಿನ ಅಧಾರ ಸ್ತಂಭಗಳು

urlಇಸ್ಲಾಮಿನ ಮಹಾ ಸೌಧವು ಐದು ಅಧಾರ ಸ್ತಂಭಗಳ ಮೇಲೆ ನಿಂತಿದೆ.

  1. ಸತ್ಯದ ಸಾಕ್ಷ್ಯ ವಹಿಸುವುದು
  2.  ನಮಾಜ್ ನಿರ್ವಹಿಸುವುದು
  3. ಝಕಾತ್ ನೀಡುವುದು
  4.  ರಂಜಾನ್ ತಿಂಗಳ ವ್ರತಾಚರಣೆ
  5. ಹಜ್ಜ್ ನಿರ್ವಹಿಸುವುದು

ಇನ್ನು ಪ್ರತಿಯೊಂದನ್ನೂ ಸವಿಸ್ತಾರವಾಗಿ ತಿಳಿಯೋಣ 1.     ಸತ್ಯದ ಸಾಕ್ಷ್ಯ ವಹಿಸುವುದು ಈಗ ತಾನೆ ವಿವರಿಸಿ ಬಂದಂತೆ ಇಸ್ಲಾಂ ಏಕದೇವತ್ವ,ಪ್ರವಾದಿತ್ವ ಮತ್ತು ಪರಲೋಕವಿಶ್ವಾಸಗಳಂತಹ ಮೂಲಭೂತ ನಂಬಿಕೆಗಳನ್ನೊಳಗೊಂಡಿದೆ.ಈ ನಂಬಿಕೆಗಳ ಅಂಗೀಕಾರ ಪ್ರಖ್ಯಾಪನೆಯನ್ನೇ ಸತ್ಯದ ಸಾಕ್ಷ್ಯ ವಹಿಸುವುದೆಂದು ಹೇಳಲಾಗುತ್ತದೆ. “ಸ್ರಷ್ಟಿಕರ್ತನೂ, ಪರಿಪಾಲಕನೂ ಆದ ಏಕಅಲ್ಲಾಹನ ಹೊರತು ಆರಾಧನೆ, ವಿಧೇಯತೆ ಮತ್ತು ಅನುಸರಣೆಗೆ ಅರ್ಹರಾದವರು ಬೇರಾರೂ ಇಲ್ಲ ಮತ್ತು ಮುಹಮ್ಮದ್(ಸ) ಅಲ್ಲಾಹನ ದಾಸರೂ ಅಂತಿಮ ದೂತರೂ ಆಗಿರುವರು” ಎಂದಾಗಿದೆ ಇದರ ಸಾರ. 2.     ನಮಾಜ್ ನಿರ್ವಹಿಸುವುದು ಎರಡೆನೆಯ ಕರ್ಮ ನಮಾಜ್ ನಿರ್ವಹಿಸುವುದಾಗಿದೆ.ಪ್ರತಿ ದಿನ ಹಗಲು ರಾತ್ರಿ ಯಾಗಿ ಐದುಬಾರಿ ತನ್ನ ಸ್ರಷ್ಟಿಕರ್ತನೊಂದಿಗೆ ನೇರಸಂಪರ್ಕ ಸಾಧಿಸ ಬಹುದಾದ ಆರಾಧನೆಯಾಗಿದೆ ಈ ನಮಾಜ್. ನಿಜ ಜೀವ ನದ ಪ್ರತಿ ಘಳಿಗೆಯಲ್ಲೂ ಅಲ್ಲಾಹನೊಂದಿಗೆ ನಿರಂತರ ಸಂಪರ್ಕ ಸಾಧಿಸುವುದೂ ಇದರ ಮೂಲೋದ್ದೇಶ ಗಳಲ್ಲೊಂದು. ನಮಾಜ್ ಮನುಷ್ಯನ ಅಂತರಂಗವನ್ನೂ ಬಹಿರಂಗವನ್ನೂ ಕೊಳಕು ಮತ್ತು ಮಾಲಿನ್ಯ ಗಳಿಂದ ಶುಚಿಗೊಳಿಸುವ ಸಾಧನವೂ ಹೌದು. ಅಂಗಾಂಗಗಳನ್ನು ಶುಚಿಗೊಳಿಸದೆ ನಮಾಜ್ ನಿರ್ವಹಿಸಲು ಸಾಧ್ಯವೇ ಇಲ್ಲ. ಪವಿತ್ರ ಕುರ್‌ಆನ್ ಹೇಳುತ್ತದೆ: “ಓ,ಸತ್ಯ ವಿಶ್ವಾಸಿಗಳೇ!ನೀವು ನಮಾಜಿಗೆಂದು ಹೊರಟಾಗ ನಿಮ್ಮಮುಖಗಳನ್ನು ಮತ್ತು ಮೊಣಕೈ ಗಂಟುಗಳವರೆಗೆ ಕೈಗಳನ್ನು ತೊಳೆದು ಕೊಳ್ಳಿರಿ. ಜನಾಬತ್ ಅಥವಾ ವೀರ್ಯಸ್ಖಲನಾ ನಂತರದ ಮಾಲಿನ್ಯದ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧ ರಾಗಿ ಕೊಳ್ಳಿರಿ. ನೀವು ಅನಾರೋಗ್ಯದಿಂದಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲ ಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತ್ರೀಯರನ್ನು ಸ್ಪರ್ಶಿಸಿದ್ದರೆ ಮತ್ತು ಆಬಳಿಕ ನೀರು ಸಿಗದೇ ಹೋದರೆ ಶುದ್ಧ ಮಣ್ಣನ್ನು ಉಪಯೋಗಿಸಿ ಕೊಳ್ಳಿರಿ. ಅದರ ಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿಕೊಳ್ಳಿರಿ. ಅಲ್ಲಾಹ್ ನಿಮ್ಮ ಜೀವನ ವನ್ನು ಸಂಕುಚಿತಗೊಳಿಸಲಿಚ್ಚಿಸುವುದಿಲ್ಲ.ಬದಲಾಗಿನೀವು ಕ್ರತಜ್ಞರಾಗಲೆಂದು.ಅವನು ನಿಮ್ಮನ್ನು ಪರಿಶುದ್ಧಗೊಳಿಸಲಿಕ್ಕೂ ನಿಮ್ಮಮೇಲೆ ತನ್ನ ಕೊಡುಗೆಗಳನ್ನು ಪರಿಪೂರ್ಣಗೊಳಿಸಲಿಕ್ಕೂ ಇಚ್ಚಿಸುತ್ತಾನೆ. (ಪವಿತ್ರ ಕುರ್‌ಆನ್: ಅಧ್ಯಾಯ೫ಸೂಕ್ತ ೬) ಪ್ರವಾದಿ ಮುಹಮ್ಮದ್(ಸ)ಈ ರೀತಿ ಹೇಳಿರುವರು: “ನಿಮ್ಮ ಪೈಕಿ ಒಬ್ಬಾತನ ಮನೆಯ ಮುಂದೆ ಒಂದು ನದಿ ಹರಿಯುತ್ತಿದೆ, ಅದರಲ್ಲಿ ಅವನು ಪ್ರತಿ ದಿನ ಐದುಬಾರಿ ಸ್ನಾನ ಮಾಡುತ್ತಾನೆಂದಾದರೆ ಅವನ ಕುರಿತು ನಿಮ್ಮ ಅಭಿಪ್ರಾಯವೇನು?ಆತನ ಶರೀರದಲ್ಲಿ ಅಲ್ಪವಾದರೂ ಮಲಿನತೆ ಅಥವಾ ಕೊಳಕು ಬಾಕಿಯಿರುವುದೇ? ಸಹಚರರು ಉತ್ತರಿಸಿದರು, ಇಲ್ಲ, ಅವನ ಶರೀರದಲ್ಲಿ ಸ್ವಲಪವೂ ಮಲಿನತೆ ಅಥವಾ ಕೊಳಕು ಬಾಕಿಯಿರ ಲಾರದು. ಆಗ ಪ್ರವಾದಿ(ಸ) ಹೇಳಿದರು ಇದೇತರ ಐದು ಸಮಯದ ನಮಾಜ್ ಗಳಿಂದಲೂ ಅಲ್ಲಾಹನು ವ್ಯಕ್ತಿಯ ಪಾಪಗಳನ್ನು ಕ್ಷಮಿಸಿ ಬಿಡುತ್ತಾನೆ” ಹೌದು, ನಮಾಜ್ ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ. 3.     ಝಕಾತ್ ನೀಡುವುದು ಇಸ್ಲಾಮಿನ ಮೂರನೇ ಕಡ್ಡಾಯ ಕರ್ಮ ಝಕಾತ್ ಆಗಿದೆ .ನಮಾಜ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ದೇವ ಸಂಪ್ರೀತಿಯನ್ನು ಗಳಿಸುವ ಮಾರ್ಗವಾಗಿದೆ. ಒಬ್ಬ ಸ್ಥಿತಿವಂತ ಮುಸ್ಲಿಂ ತನ್ನ ಸಂಪಾದನೆಯ ನಿರ್ದಿಷ್ಟ ಭಾಗವನ್ನು ಅರ್ಹರಿಗೆ ನಿರ್ಬಂಧಿತವಾಗಿ ಕೊಡಲೇ ಬೇಕು. ಝಕಾತ್ ಸಿರಿವಂತರು ತೋರುವ ಔದಾರ್ಯವಲ್ಲದೆ ಅದು ಬಡವರ ಹಕ್ಕಾಗಿದೆ ಎಂದು ಇಸ್ಲಾಂ ತಿಳಿಸುತ್ತದೆ.ಸಂಪತ್ತಿನ ಒಡೆಯ ಅಲ್ಲಾಹನಾಗಿರುತ್ತಾನೆ.ಮನುಷ್ಯಅದರ ಮೇಲ್ವಿಚಾರಕ ಮಾತ್ರನಾಗಿರುತ್ತನೆಂದೂ ಅದು ನೆನಪಿಸುತ್ತದೆ.ಸಮಾಜಿಕ ಜೀವನದ ಕೆಲವು ಮಹತ್ತರವಾದ ಉದ್ದೇಶಗಳನ್ನು ಈಡೇರಿಸುವುದೂ ಝಕಾತಿನ ಔಚಿತ್ಯಗಳಲ್ಲೊಂದು.ಅವುಗಳಲ್ಲಿ ಮುಖ್ಯವಾದುದನ್ನು ನಾನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ೧. ಸಂಪತ್ತನ್ನು ಶುಚಿಗೊಳಿಸುವುದು.ಅದನ್ನು ವ್ರದ್ಧಿಸುವುದು ಮತ್ತು ಅಲ್ಲಾಹನ ಆಜ್ಞಾಪಾಲನೆಯಿಂದ ಸಂಭವನೀಯ ವಿಪತ್ತುಗಳಿಂದ ಅದನ್ನು ರಕ್ಷಿಸಿಕೊಳ್ಳುವುದು. ೨. ಲೋಭ, ಜಿಪುಣತೆ ಮತ್ತು ದುರಾಸೆಗಳಂತಹ ದುಶ್ಚಟಗಳಿಂದ ಮನುಷ್ಯ ಮನಸ್ಸನ್ನು ಸ್ವಚ್ಛಗೊಳಿಸುವುದು. ೩. ಬಡವರು ಮತ್ತು ನಿರ್ಗತಿಕರೊಂದಿಗೆ ಸಹಾನುಭೂತಿ ತೋರುವುದರ ಜೊತೆಗೆ ದರಿದ್ರರ,ವಂಚಿತರ ಮತ್ತು ಹಸಿದವರ ಅವಶ್ಯಕತೆಗಳನ್ನು ಪೂರೈಸುವುದು. ೪. ಸಾರ್ವಜನಿಕ ಹಿತಾಸಕ್ತಿಗಳನ್ನು ಕಾಪಾಡುವುದು ಮತ್ತು ಸಮಾಜವನ್ನು ಬಲಿಷ್ಠಗೊಳಿಸುವುದು. ಇದೇ ಕಾರಣದಿಂದ ಝಕಾತ್ ನೀಡದವರಿಗೆ ಮತ್ತು ಅದನ್ನು ತಡೆಹಿಡಿದವರಿಗೆ ಕಠಿಣ ಶಿಕ್ಷೆಯಾಗುವುದೆಂದು ಪವಿತ್ರಕುರ್‌ಆನ್ ಎಚ್ಚರಿಕೆ ನೀಡುತ್ತದೆ. ಅದು ಹೇಳುತ್ತದೆ: ” ಓ ಸತ್ಯ ವಿಶ್ವಾಸಿಗಳೇ! ಗ್ರಂಥದವರ ಅಧಿಕಾಂಶ ವಿಧ್ವಾಂಸರೂ ಸಂತರೂ ಜನರ ಸಂಪತ್ತನ್ನು ಅನಧಿಕ್ರತ ವಿಧಾನಗಳಿಂದ ಕಬಳಿಸುತ್ತಾರೆ ಮತ್ತು ಅವರನ್ನು ಅಲ್ಲಾಹನ ಮಾರ್ಗದಿಂದ ತಡೆಯುತ್ತಾರೆ. ಚಿನ್ನವನ್ನೂ ಬೆಳ್ಳಿಯನ್ನೂ ಸಂಗ್ರಹಿಸಿಟ್ಟು ಅವುಗಳನ್ನು ದೇವಮಾರ್ಗದಲ್ಲಿ ಖರ್ಚು ಮಾಡದವರಿಗೆ ವೇದನಾಯುಕ್ತ ಯಾತನೆಯ ಸುವಾರ್ತೆ ನೀಡಿರಿ.ಈ ಚಿನ್ನ ಬೆಳ್ಳಿಗಳ ಮೇಲೆ ನರಕಾಗ್ನಿಯನ್ನು ಉರಿಸಲಾಗುವುದು.ತರುವಾಯ ಅದರಿಂದಲೇ ಅವರ ಹಣೆಗಳಿಗೂ,ಪಾರ್ಶ್ವಗಳಿಗೂ ಮತ್ತು ಬೆನ್ನುಗಳಿಗೂ ಬರೆ ಹಾಕಲಾಗು ವುದು.ನೀವು ನಿಮಗಾಗಿ ಸಂಗ್ರಹಿಸಿಟ್ಟಿದ್ದ ಸಂಪತ್ತು ಇದುವೇ,ಈಗ ನೀವು ಕೂಡಿ ಹಾಕಿದ್ದ ಸಂಪತ್ತನ್ನು ಸವಿಯಿರಿ”(ಎನ್ನಲಾಗುವುದು) (ಪವಿತ್ರಕುರ್‌ಆನ್:ಅಧ್ಯಾಯ ೯ಸೂಕ್ತ ೩೪-೩೬) ಮಾನ್ಯರೇ! ಒಂದು ವಿಭಾಗ ಜನರು ಸಂಪತ್ತನ್ನು ಶೇಖರಿಸಿಡುವುದು ಮತ್ತೊಂದು ವಿಭಾಗ ಜನರು ನಿರ್ಗತಿಕರಾಗಿರುವುದಕ್ಕೆ ಇಸ್ಲಾಂ ಎಂದಿಗೂ ಆಸ್ಪದ ಕೊಡುವುದಿಲ್ಲ. 4.     ರಂಜಾನ್ ತಿಂಗಳ ವ್ರತಾಚರಣೆ ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಂಜಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ.ಮಾನವಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್‌ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯ ಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ. 5.     ಹಜ್ಜ್ ನಿರ್ವಹಿಸುವುದು ಐದನೆಯ ಮತ್ತು ಕೊನೆಯ ಕಡ್ಡಾಯಕರ್ಮ ಹಜ್ಜ್ ನಿರ್ವಹಿಸುವುದಾಗಿದೆ. ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯವುಳ್ಳವರು ನಿರ್ಬಂಧಿತರಾಗಿ ಕೈಗೊಳ್ಳಲೇಬೇಕಾದ ಅರೇಬಿಯಾದಲ್ಲಿರುವ ಮಕ್ಕಾನಗರದ ತೀರ್ಥಯಾತ್ರೆಯ ಹೆಸರೇ ಹಜ್ಜ್ ಆಗಿರುತ್ತದೆ. ಹಜ್ಜ್ ವಿಶ್ವಸಹೋದರತೆಯನ್ನು ಪ್ರತಿಪಾದಿಸುವ ಮಹಾ ಸಮ್ಮೇಳನವಾಗಿದೆ.ಸಕಲ ಮನುಷ್ಯರೂ ಅಲ್ಲಾಹನ ದಾಸರು ಮತ್ತು ಅವನ ಅನುಸರಣೆ ಮಾಡಬೇಕಾದವರು ಮತ್ತು ಆತನ ಅನುಸರಣೆಯಲ್ಲಿಯೇ ಸಮಾನತೆ ಮತ್ತು ಸಮಾಧಾನ ಕಂಡುಕೊಳ್ಳಬೇಕಾದವರು ಎಂಬ ತಾತ್ಪರ್ಯ ವನ್ನು ಹಜ್ಜ್ ನೀಡುತ್ತದೆ.ಯತಾರ್ಥದಲ್ಲಿ ಏಕದೇವತ್ವವನ್ನು ಬಲವಾಗಿ ಪ್ರತಿಪಾದಿ ಸುವ ಇಸ್ಲಾಂ, ಮಾನವೀಯ ಏಕತೆಯನ್ನು ಸಾಧಿಸಿ ತೋರಿಸಿದ ಏಕೈಕ ಧರ್ಮವಾಗಿದೆ. ಇದೇ ಕಾರಣದಿಂದ ’ಮಾನವ ಸಮಾನತೆಯ ಯಾವ ಎತ್ತರಕ್ಕೆ ಇಸ್ಲಾಂ ತಲುಪಿರುತ್ತದೆ ಅಲ್ಲಿಗೆ ತಲುಪಲು ಇತರ ಯಾವ ಧರ್ಮಕ್ಕೂ ಸಾಧ್ಯವಾಗಿಲ್ಲವೆಂದು’ ಸ್ವಾಮಿ ವಿವೇಕಾನಂದರಿಗೆ ಹೇಳಬೇಕಾಯಿತು.

Related Posts

Leave A Comment

Voting Poll

Get Newsletter